ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ಬಿಜೆಪಿ ಇದೀಗ ತಿರಂಗಾ ಯಾತ್ರೆಗೆ ಮುಂದಾಗಿದೆ.
ಭಯೋತ್ಪಾದನಾ ಚಟುವಟಿಕೆ ವಿರುದ್ಧ ರಾಜಧಾನಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಗೆ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪೊಲೀಸರ ವಿರುದ್ಧ ವಾಗ್ವಾದಕ್ಕಿಳಿದಿದ್ದು ಹೈಡ್ರಾಮಾ ನಡೆದಿದೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಟೌನ್ ಹಾಲ್ ಮುಂಭಾಗದಿಂದ ಫ್ರೀಡಂಪಾರ್ಕ್ ವರೆಗೆ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದರು. ಈ ವೇಳೆ ಪೊಲೀಸರು ತಿರಂಗಾ ಯಾತ್ರೆ ತಡೆದು, ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಬಿಜೆಪಿ ನಾಯಕರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ವಶಕ್ಕೆ ಪಡೆದ ಕಾರ್ಯಕರ್ತರನ್ನು ಬಿಡುತ್ತಿದ್ದಂತೆ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಮತ್ತೆ ವಶಕ್ಕೆ ಪಡೆದು, ಕಾರ್ಯಕರ್ತರ ಬಳಿ ಇದ್ದ ಧ್ವಜವನ್ನು ವಶಕ್ಕೆ ಪಡೆದಿದ್ದಾರೆ.