
ಬೆಂಗಳೂರು: ನಾನು ಈಗ ಸಂಸದನಾಗಿದ್ದೇನೆ, ಸಂಸದನಾಗಿಯೇ ಸಾಯುವುದಿಲ್ಲ. ನನ್ನ ನಸೀಬು ಕೆಟ್ಟು ಏನು ಬೇಕಾದರೂ ಆಗಬಹುದು. ರಾಜಕಾರಣದಲ್ಲಿಯೂ ಏನಾದರೂ ಆಗಬಹುದು ಎಂದು ಮೈಸೂರು -ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, 10 ವರ್ಷ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.
ಈ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪ ಸಾಧ್ಯತೆ ಇದೆ ಎನ್ನಲಾಗಿದ್ದು, ಅವರು ಫೇಸ್ಬುಕ್ ನಲ್ಲಿ ಮಾತನಾಡಿ, ಕ್ಷೇತ್ರದ ಜನರಿಗೆ ಧನ್ಯವಾದ ಅರ್ಪಿಸಿ ಕೊಡಗಿನ ಜನ ತೋರಿಸಿದ ಪ್ರೀತಿಯನ್ನು ಮರೆಯಲಾರೆ ಎಂದು ಭಾವುಕರಾಗಿ ಹೇಳಿದ್ದಾರೆ.
ಮೂಡಾದಲ್ಲಿ ಬದಲಿ ಸೈಟ್ ಮಾಡಿದ್ದರೆ ಕೋಟ್ಯಂತರ ಹಣ ಮಾಡುತ್ತಿದ್ದೆ. ಬದಲಿ ಸೈಟ್ ಮಾಡಿಕೊಂಡಿಲ್ಲ. ಗ್ಯಾಸ್ ಪೈಪ್ ಲೈನ್ ವಿಚಾರದಲ್ಲಿ ರಾಜಕಾರಣ ಮಾಡಿದರು. ಮೈಸೂರು ಜನ ರಾಜಕಾರಣ ಮಾಡುವವರು ರಾಜರಾಗಿದ್ದ ಶ್ರೀಕಂಠ ದತ್ತ ಒಡೆಯರವರನ್ನೇ ಸೋಲಿಸಿದರು. ಮೈಸೂರಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನನ್ನಿಂದ ಯಾರೂ ಕೂಡ ಸೋತಿಲ್ಲ. ನನ್ನ ಕ್ಷೇತ್ರದ ಆಚೆಗೂ ಕೂಡ ಜನ ನನ್ನನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಈಗಲೂ ನನಗೆ ಟಿಕೆಟ್ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಎಂಪಿ ಟಿಕೆಟ್ ಕೈತಪ್ಪುವ ಆತಂಕದಲ್ಲಿರುವ ಪ್ರತಾಪ್ ಸಿಂಹ, ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳುತ್ತಲೇ ಕ್ಷೇತ್ರದ ಜನರಿಗೆ ಧನ್ಯವಾದಗಳು. ಕೊಡಗಿನ ಜನ ತೋರಿಸಿದ ಪ್ರೀತಿಯನ್ನು ಮರೆಯಲಾರೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ ಎಂದು ಭಾವುಕರಾಗಿದ್ದಾರೆ.
ಸ್ವಾರ್ಥಕ್ಕಾಗಿ ಯಾರ ಮನೆ ಬಾಗಿಲನ್ನೂ ನಾನು ತಟ್ಟಿಲ್ಲ. ಟಿಕೆಟ್ ಸಿಗುತ್ತದೆಯೋ, ಇಲ್ಲವೋ ಚಾಮುಂಡೇಶ್ವರಿ ದೇವಿ ನಿರ್ಧರಿಸುತ್ತಾಳೆ. ನನ್ನ ಏಳಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ ಎಂದು 10 ವರ್ಷಗಳ ರಾಜಕಾರಣದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಮಡಿಕೇರಿಯ ಜನರು ನೇರ ಹಾಗೂ ನಿಷ್ಠುರವಾದಿಗಳು. ಮೈಸೂರು ಜನ ರಾಜಕಾರಣ ಮಾಡುವವರು. ಮೈಸೂರಿನಲ್ಲಿ ಇರುವಷ್ಟು ರಾಜಕಾರಣ ಎಲ್ಲಿಯೂ ಇಲ್ಲ. ಜನರ ಮಧ್ಯ ಇರುವವರಿಗೆ ಪಕ್ಷ ಟಿಕೆಟ್ ನೀಡಬೇಕು. ನನ್ನಿಂದ ಯಾರೂ ಸಹ ಸೋತಿಲ್ಲ. ನನ್ನ ವಿರುದ್ಧ ಏಕೆ ಇಲ್ಲ ಸಲದ ಆರೋಪ ಮಾಡುತ್ತೀರಿ. ನನ್ನ ಕ್ಷೇತ್ರದ ಆಚೆಗೂ ಜನ ಪ್ರೀತಿ-ವಿಶ್ವಾಸ ತೋರಿಸುತ್ತಾರೆ. ಈಗಲೂ ಪಕ್ಷ ಟಿಕೆಟ್ ಕೊಡುತ್ತದೆ ಎಂದು ವಿಶ್ವಾಸವಿದೆ ಎಂದು ಹೇಳಿದ್ದಾರೆ.