ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪ್ರಕಟಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ. ಸಿ.ಎನ್. ಮಂಜುನಾಥ್, ಮೈಸೂರಿನಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ದಾವಣಗೆರೆಯಿಂದ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ, ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ.
ದಕ್ಷಿಣ ಕನ್ನಡದಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಚಾಮರಾಜನಗರದಿಂದ ಎಸ್,.ಬಾಲರಾಜ್, ಕೊಪ್ಪಳದಿಂದ ಬಸವರಾಜ ಕ್ಯಾವಟೂರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಉಳಿದಂತೆ ಅಣ್ಣಾ ಸಾಹೇಬ್ ಜೊಲ್ಲೆ(ಚಿಕ್ಕೋಡಿ), ಪಿ.ಸಿ. ಗದ್ದಿಗೌಡರ್(ಬಾಗಲಕೋಟೆ), ರಮೇಶ ಜಿಗಜಿಣಗಿ(ವಿಜಯಪುರ), ಉಮೇಶ್ ಜಾಧವ್(ಕಲಬುರಗಿ) ಭಗವಂತ ಖೂಬಾ(ಬೀದರ್), ಪ್ರಹ್ಲಾದ್ ಜೋಶಿ(ಧಾರವಾಡ), ಬಿ.ವೈ. ರಾಘವೇಂದ್ರ(ಶಿವಮೊಗ್ಗ), ಶೋಭಾ ಕರಂದ್ಲಾಜೆ(ಬೆಂಗಳೂರು ಉತ್ತರ), ಪಿ.ಸಿ. ಮೋಹನ್(ಬೆಂಗಳೂರು ಸೆಂಟ್ರಲ್), ತೇಜಸ್ವಿ ಸೂರ್ಯ(ಬೆಂಗಳೂರು ದಕ್ಷಿಣ) ಅವರಿಗೆ ಬಿಜೆಪಿ ಟಿಕೆಟ್ ದೊರೆತಿದೆ.
ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ವಿ. ಸೋಮಣ್ಣರಿಗೆ ತುಮಕೂರು, ಬಿ. ಶ್ರೀರಾಮುಲುಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ.
ರಾಜಕೀಯ ನಿವೃತ್ತಿ ಘೋಷಿಸಿದ ಶಿವಕುಮಾರ್ ಉದಾಸಿ, ವಿ. ಶ್ರೀನಿವಾಸ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಜಿ.ಎಸ್. ಬಸವರಾಜು, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲು, ಜಿ.ಎಂ. ಸಿದ್ದೇಶ್ವರ, ವೈ. ದೇವೇಂದ್ರಪ್ಪ, ಸಂಗಣ್ಣ ಕರಡಿ, ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್ ಕೈತಪ್ಪಿದೆ.
ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮಂಡ್ಯ, ಹಾಸನ, ಉತ್ತರ ಕನ್ನಡ, ರಾಯಚೂರು, ಬೆಳಗಾವಿ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಬೇಕಿದೆ. ಜೆಡಿಎಸ್ ಜೊತೆಗೆ ಮೈತ್ರಿ ಆಗಿರುವುದರಿಂದ ಮಂಡ್ಯ, ಹಾಸನ, ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.