ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು, ಟಿಕೆಟ್ ತಪ್ಪಿದ ಶಾಸಕರಲ್ಲಿ ನಾಲ್ವರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ಇಂದು ಅಥಣಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ. ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ವಿಧಾನಪರಿಷತ್ ಸದಸ್ಯ ಆರ್. ಶಂಕರ್ ರಾಣೇಬೆನ್ನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಜನಾರ್ದನ ರೆಡ್ಡಿ ಪಕ್ಷದಿಂದ ಟಿಕೆಟ್ ಸಿಕ್ಕಲ್ಲಿ ಸ್ಪರ್ಧಿಸಲು ರೆಡಿಯಾಗಿದ್ದಾರೆ. ಇಲ್ಲವಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಚಾಮರಾಜನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಆರ್.ಐ.ಡಿ.ಎಲ್. ಅಧ್ಯಕ್ಷ ಎಂ. ರುದ್ರೇಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.
ಸಚಿವ ಅಂಗಾರ, ಉಡುಪಿ ಶಾಸಕ ರಘುಪತಿ ಭಟ್, ಬಿಟಿಎಂ ಲೇಔಟ್ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ, ಬ್ಯಾಟರಾಯನಪುರದ ಎ. ರವಿ, ಬೆಳಗಾವಿ ಗ್ರಾಮೀಣದ ಸಂಜಯ್ ಪಾಟೀಲ್, ಬೆಳಗಾವಿ ಉತ್ತರದ ಅನಿಲ್ ಬೆನಕೆ, ರಾಮದುರ್ಗದ ಮಹದೇವಪ್ಪ ಯಾದವಾಡ, ಜಯನಗರದ ಎನ್.ಆರ್. ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.