ಶಿವಮೊಗ್ಗ: ರಾಜ್ಯದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಲುಕಿಕೊಂಡಿದೆ. ಇದನ್ನು ಸರಿಪಡಿಸಬೇಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಹಾವೇರಿಯಿಂದ ಪುತ್ರ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ, ರಾಜ್ಯದಲ್ಲಿ ಬೇರೆ ಯಾರೂ ಲಿಂಗಾಯಿತ ನಾಯಕರು ಇಲ್ಲವೇ? ಯಡಿಯೂರಪ್ಪ ಪಟ್ಟು ಹಿಡಿದು ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ನನ್ನ ಮಗ ಕಾಂತೇಶ್ ಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ? ಯಡಿಯೂರಪ್ಪ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
40 ವರ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ, ನಮಗೆ ಅನ್ಯಾಯವಾಗಿದೆ. ಹಾವೇರಿಯಿಂದ ಕಾಂತೇಶ್ ಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಬೊಮ್ಮಾಯಿ ಕೂಡ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಹಾವೇರಿಯಲ್ಲಿ ಕಾಂತೇಶ್ ಓಡಾಡಿ ಬೆಂಬಲ ಗಳಿಸಿದ್ದರು. ವಿವಿಧ ಮಠಾಧೀಶರು ಕಾಂತೇಶನ ಬೆನ್ನಿಗೆ ನಿಂತಿದ್ದರು. ನಾನೇ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುವೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಕಾಂತೇಶ್ ಗೆ ಟಿಕೆಟ್ ಕೈತಪ್ಪಿದ್ದರಿಂದ ಅಭಿಮಾನಿಗಳಿಗೆ ಬೇಸರವಾಗಿದೆ ಎಂದರು.
ಯಡಿಯೂರಪ್ಪ ನಮಗೆ ಮೋಸ ಮಾಡಿದ್ದಾರೆಂದು ಬೇಸರವಿದೆ. ಪಕ್ಷೇತರ ಅಭ್ಯರ್ಥಿಯಾಗಿ ನೀವು ಸ್ಪರ್ಧಿಸಿದ್ದಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ನಾನು ಬಯಸುತ್ತೇನೆ. ಪಕ್ಷೇತರರಾಗಿ ಗೆದ್ದು ಮೋದಿ ಅವರನ್ನು ಬೆಂಬಲಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಶುಕ್ರವಾರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.