ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದ್ದು, ಸಚಿವ ಎಸ್. ಅಂಗಾರ ಸೇರಿದಂತೆ 9 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ.
ಸುಳ್ಯದಿಂದ ಎಸ್. ಅಂಗಾರ, ಹೊಸದುರ್ಗದಿಂದ ಗೂಳಿಹಟ್ಟಿ ಶೇಖರ್, ಉಡುಪಿಯಿಂದ ರಘುಪತಿ ಭಟ್ ಅವರಿಗೆ ಟಿಕೆಟ್ ದೊರೆತಿಲ್ಲ. ಪುತ್ತೂರಿನಿಂದ ಸಂಜೀವ ಮಠಂದೂರು, ಕಾಪು ಕ್ಷೇತ್ರದಿಂದ ಲಾಲಾಜಿ ಮೆಂಡನ್, ಶಿರಹಟ್ಟಿಯಿಂದ ರಾಮಪ್ಪ ಲಮಾಣಿ, ಬೆಳಗಾವಿ ಉತ್ತರದಿಂದ ಅನಿಲ್ ಬೆನಕೆ, ರಾಮದುರ್ಗದಿಂದ ಮಹಾದೇವ ಯಾದವಾಡ ಅವರಿಗೆ ಟಿಕೆಟ್ ತಪ್ಪಿದೆ. ವಿಜಯನಗರ ಕ್ಷೇತ್ರದಲ್ಲಿ ಸಚಿವ ಆನಂದ್ ಸಿಂಗ್ ಅವರಿಗೆ ಟಿಕೆಟ್ ತಪ್ಪಿದ್ದು, ಅವರ ಪುತ್ರ ಸಿದ್ದಾರ್ಥ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ.
ಅಥಣಿ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ, ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಮುದ್ದಹನುಮೇಗೌಡ, ರಾಣೇಬೆನ್ನೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಶಂಕರ್, ತುಮಕೂರು ನಗರ ಕ್ಷೇತ್ರದ ಟಿಕೆಟ್ ಕೇಳಿದ್ದ ಸೊಗಡು ಶಿವಣ್ಣ, ಹಾಗೂ ಆನೇಕಲ್ ಕ್ಷೇತ್ರದಲ್ಲಿ ಆಕಾಂಕ್ಷಿಯಾಗಿದ್ದ ಐಎಎಸ್ ಮಾಜಿ ಅಧಿಕಾರಿ ಶಿವರಾಂ, ಹನೂರು ಕ್ಷೇತ್ರದ ರುದ್ರೇಶ್, ಚಿಕ್ಕಪೇಟೆಯ ಎನ್.ಆರ್. ರಮೇಶ್ ಅವರಿಗೆ ಟಿಕೆಟ್ ಕೈತಪ್ಪಿದೆ.
ಯಡಿಯೂರಪ್ಪ ಪುತ್ರ ವಿಜಯೇಂದ್ರ, ಉಮೇಶ್ ಜಾಧವ್ ಪುತ್ರ ಅವಿನಾಶ್, ಸಂಸದ ಬಸವರಾಜ ಪುತ್ರ ಜ್ಯೋತಿ ಗಣೇಶ್, ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್, ಉಮೇಶ್ ಕತ್ತಿ ಪುತ್ರ ನಿಖಿಲ್ ಕತ್ತಿ ಟಿಕೆಟ್ ಪಡೆದುಕೊಂಡಿದ್ದಾರೆ.