ಗುಜರಾತ್ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಈಗಾಗಲೇ ದೆಹಲಿ, ಪಂಜಾಬ್ ನಲ್ಲಿ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷ ಈಗ ಗುಜರಾತಿನಲ್ಲಿಯೂ ತನ್ನ ಕಮಾಲ್ ತೋರಿಸಲು ಮುಂದಾಗಿದೆ. ಆದರೆ ಸಮೀಕ್ಷೆಗಳು ಮಾತ್ರ ಗುಜರಾತಿನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿವೆ.
ಇದರ ಮಧ್ಯೆ ಗುಜರಾತ್ ಬಿಜೆಪಿ ನಾಯಕರೊಬ್ಬರು ಪಂಜಾಬ್ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಅವರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ಕಾರಣಕ್ಕೆ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದಾರೆ. ಬಿಜೆಪಿ ನಾಯಕ ಕಿಶನ್ ಸಿನ್ಹಾ ಸೋಲಂಕಿ ಶಿಸ್ತು ಕ್ರಮಕ್ಕೆ ಒಳಗಾದವರಾಗಿದ್ದಾರೆ.
ಕಿಶನ್ ಸಿನ್ಹಾ ಸೋಳಂಕಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಇದಕ್ಕೆ ಭಗವಂತ ಮಾನ್ ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಿಶನ್ ಸಿನ್ಹಾ ಸೋಳಂಕಿ, ಭಗವಂತ ಮಾನ್ ಜೊತೆ ತೆಗೆಸಿಕೊಂಡಿದ್ದ ಸೆಲ್ಫಿಯನ್ನು ಅಪ್ಲೋಡ್ ಮಾಡಿ ಧನ್ಯವಾದಗಳು ಎಂದು ತಿಳಿಸಿದ್ದರು.
ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ ಕೆಲ ಹೊತ್ತಿನಲ್ಲಿಯೇ ಕಿಶನ್ ಸಿನ್ಹಾ ಸೋಳಂಕಿಯವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಿಶನ್, ಆಮ್ ಆದ್ಮಿ ಪಕ್ಷದ ನಾಯಕರೊಂದಿಗೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದು, ಅವರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳ ಮಧ್ಯೆ ಈ ಕ್ರಮ ಜರುಗಿಸಲಾಗಿದೆ.