ಮಂಗಳೂರು : ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿಬಿಡುತ್ತದೆ ಎಂದಿದ್ದ ಮೋದಿಯವರೇ ಈಗ ನಮ್ಮ ಗ್ಯಾರಂಟಿಯನ್ನು ಕದ್ದು “ಮೋದಿ ಗ್ಯಾರಂಟಿ-ಮೋದಿ ಗ್ಯಾರಂಟಿ” ಎಂದು ಭಜನೆ ಆರಂಭಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿಮ್ಮನ್ನು ಮಂಗಳೂರು, ಉಡುಪಿ ಜನ ಯಾಕೆ ಗೆಲ್ಲಿಸಬೇಕು ಕಟೀಲ್ ಅವರೇ, ಕರಂದ್ಲಾಜೆ ಅವರೇ, ಬನ್ನಿ ಜಿಲ್ಲೆಯ ಸ್ವಾಭಿಮಾನಿ ಜನತೆಗೆ ಉತ್ತರ ಕೊಡಿ. ನಳಿನ್ ಕುಮಾರ್ ಕಟೀಲ್ ಅವರೇ ಒಂದೇ ಒಂದು ದಿನ ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿದಿಯೇನಪ್ಪಾ? ತಾಯಿ ಶೋಭಾ ಕರಂದ್ಲಾಜೆ ನೀವಾದ್ರೂ ರಾಜ್ಯದ ಪರವಾಗಿ ಒಂದೇ ಒಂದು ಮಾತಾಡಿದ್ದೀಯೇನಮ್ಮಾ ತಾಯಿ? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ. ಮೋದಿಯವರು ಇದುವರೆಗೂ ಹೇಳಿದ್ದರಲ್ಲಿ ಯಾವುದನ್ನಾದರೂ ಈಡೇರಿಸಿದ್ದಾರಾ? ಜನರ ಬದುಕಿಗೆ ನೆರವಾಗುವ, ದೇಶದ ಮಕ್ಕಳು-ಯುವಜನರ ಬದುಕು-ಭವಿಷ್ಯಕ್ಕೆ ಅನುಕೂಲ ಆಗುವ ಒಂದೇ ಒಂದನ್ನಾದರೂ ಈಡೇರಿಸಿದ್ದಾರಾ?
ದಕ್ಷಿಣ ಕನ್ನಡದ ಜನತೆಗೆ ರಾಜಕೀಯ ಪ್ರಜ್ಞಾವಂತಿಕೆ ಹೆಚ್ಚಾಗಿದೆ. ಸತ್ಯ ಹೇಳುವವರು ಮತ್ತು ಸುಳ್ಳು ಹೇಳುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞಾವಂತಿಕೆಯೂ ಇದೆ. ಈ ಕಾರಣಕ್ಕೆ ಮಂಗಳೂರಿನಲ್ಲೇ ಮೊದಲ ಸಭೆ ಮಾಡುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ.
ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಕಿತ್ತಾಟ, ಜಗಳ ತಂದಿಟ್ಟಿರುವುದು ಬಿಟ್ಟರೆ ಜನ ಸಾಮಾನ್ಯರ ಬದುಕಿಗೆ ಅನುಕೂಲ ಆಗುವ ಒಂದೇ ಒಂದು ಕಾರ್ಯಕ್ರಮವನ್ನು ಕಳೆದ ಹತ್ತು ವರ್ಷಗಳಲ್ಲಿ ಜಾರಿ ಆಗಿದೆಯಾ? ಡೀಸೆಲ್-ಪೆಟ್ರೋಲ್ ಬೆಲೆ ಕಡಿಮೆ ಆಯ್ತಾ? ಅಡುಗೆ ಗ್ಯಾಸ್ ಬೆಲೆ ಕಡಿಮೆ ಆಗಿದೆಯಾ? ಕಪ್ಪು ಹಣ ವಾಪಾಸ್ ಬಂದಿದೆಯಾ? ಅಚ್ಛೆ ದಿನ್ ಯಾರಿಗಾದರೂ ಬಂದಿದೆಯಾ? ಹೇಳಿ.
2013-18 ರ ವರೆಗೂ ನಾವು ಕೊಟ್ಟ ಭರವಸೆಗಳಲ್ಲಿ ಶೇ.98 ರಷ್ಟನ್ನು ಈಡೇರಿಸಿದೆವು. ಈ ಬಾರಿ ಚುನಾವಣೆ ವೇಳೆ 5 ಗ್ಯಾರಂಟಿಗಳ ಜೊತೆಗೆ ಹಲವು ಭರವಸೆ ನೀಡಿದ್ದೆವು. ಕೇವಲ 8 ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ ಇಡೀ ದೇಶಕ್ಕೆ, ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಕೊಟ್ಟಿದ್ದೇವೆ.
ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದೆವು. ನಮ್ಮ ಮೊದಲ ಗ್ಯಾರಂಟಿಯಾದ ಶಕ್ತಿ ಯೋಜನೆಯಿಂದ 155 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದರು. ಬಿಜೆಪಿ ತನ್ನ ಇತಿಹಾಸದಲ್ಲಾಗಲೀ, ವರ್ತಮಾನದಲ್ಲಾಗಲೀ ಇಷ್ಟೊಂದು ಜನೋಪಯೋಗಿ ಕೆಲಸ ಮಾಡಿದ್ದರೆ ಒಂದೇ ಒಂದು ಉದಾಹರಣೆ ಕೊಡಿ ಎಂದರು.
ಅದೇ ರೀತಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳಲ್ಲೂ ಕೋಟಿ ಕೋಟಿ ಮಹಿಳೆಯರು ಗ್ಯಾರಂಟಿಗಳ ಲಾಭವನ್ನು ಪ್ರತೀ ತಿಂಗಳು ಪಡೆಯುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ ಬಳಿಕವೂ ರಾಜ್ಯದ ಆರ್ಥಿಕತೆಯನ್ನು ಸದೃಡವಾಗಿ ಪ್ರಗತಿ ಪಥದಲ್ಲಿ ಮುನ್ನಡೆಸುತ್ತಿದ್ದೇವೆ ಎಂದು ಹೇಳಿದರು.