ಯಾದಗಿರಿ: ರಾಜ್ಯ ಬಿಜೆಪಿಯಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ವಿಳಂಬ, ಆಪರೇಷನ್ ಹಸ್ತದತ್ತ ಮುಖ ಮಾಡಿರುವ ಹಾಲಿ, ಮಾಜಿ ಶಾಸಕರ ಬಗ್ಗೆ ಸಾಕಷ್ಟು ಚರ್ಚೆ ನಡೆದಿರುವ ಮಧ್ಯೆಯೇ ಬಿಜೆಪಿ ಮಾಜಿ ಶಾಸಕ ತಾನೂ ಕೂಡ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಈಗಾಗಲೇ ಹಲವರು ಪೈಪೋಟಿ ನಡೆಸಿದ್ದು, ಮಾಜಿ ಸಚಿವ ವಿ.ಸೋಮಣ್ಣ ಹೈಕಮಾಂಡ್ ಮಟ್ಟದಲ್ಲೇ ಲಾಭಿ ನಡೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಮತ್ತೋರ್ವ ಮಾಜಿ ಶಾಸಕ ರಾಜುಗೌಡ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಾಜುಗೌಡ ಹಾಗೂ ಬಿ.ಸಿ.ಪಾಟೀಲ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ಮೂಲಕ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿತ್ತು. ಇದೀಗ ಯಾದಗಿರಿಯ ಹುಣಸಗಿ ಪಟ್ಟಣದಲ್ಲಿ ಮಾತನಾಡಿರುವ ರಾಜುಗೌಡ ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಹೀಗಿರುವಾಗ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಗೆ ಹೋಗಬೇಕು? ಎಂದು ಕೇಳಿದ್ದಾರೆ.
ವಾಜಪೇಯಿ, ಇಂದಿರಾ ಗಾಂಧಿ, ದೇವೇಗೌಡ, ಸಿದ್ದರಾಮಯ್ಯ ಸೋತಿಲ್ಲವೇ? ಸೋತಾಗ ನಿಷ್ಠೆಯಿಂದ ಕೆಲಸ ಮಾಡಿದರೆ ಉನ್ನತ ಹುದ್ದೆ ಸಿಗುತ್ತದೆ. ಚುನಾವಣೆಯಲ್ಲಿ ಪಕ್ಷ ಸೋತಾಗ ಪಕ್ಷದ ಜೊತೆಗಿರಬೇಕು. ನಾನು ದಿನದ 24 ಗಂಟೆ ರಾಜಕಾರಣ ಮಾಡಲ್ಲ, ಪಾರ್ಟ್ ಟೈಂ ರಾಜಕಾರಣಿ. ಒಕ್ಕಲುತನ ಮಾಡುವುದು ಎಂದರೆ ನನಗೆ ಇಷ್ಟ. ಪಕ್ಷ ಸೋತರೂ ಪಕ್ಷದ ಜೊತೆ ಇದ್ದರೆ ಮುಂದೆ ಉಜ್ವಲ ಭವಿಷ್ಯ ಇರುತ್ತದೆ. ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.