ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅಲ್ಲದೆ ಬಿಜೆಪಿಯ ಇತರೆ ಕೆಲ ನಾಯಕರ ವಿರುದ್ಧವೂ ಯತ್ನಾಳ್ ಬಹಿರಂಗವಾಗಿಯೇ ಮಾತನಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ನೀಡುವ ಕೆಲವು ಹೇಳಿಕೆಗಳು ಬಿಜೆಪಿ ನಾಯಕರಿಗೆ ಇರುಸುಮುರುಸು ತಂದಿದ್ದವು. ಆದರೆ ಪ್ರತಿಪಕ್ಷ ಕಾಂಗ್ರೆಸ್, ಯತ್ನಾಳ್ ಅವರ ಹೇಳಿಕೆಗಳನ್ನು ಇಟ್ಟುಕೊಂಡು ಬಿಜೆಪಿ ನಾಯಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ಟಾಂಗ್ ನೀಡುತ್ತಿತ್ತು.
ಹೀಗಾಗಿ ಬಿಜೆಪಿ ನಾಯಕರು ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು, ಇದರ ಮಧ್ಯೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯತ್ನಾಳ್ ಅವರ ಹೇಳಿಕೆಗಳ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ವೇಳೆ ಅವರು ಕೇವಲ ಶಾಸಕರಷ್ಟೇ ಎಂದು ಹೇಳಿದ್ದರು.
ಇದರ ಮಧ್ಯೆ ಸಂಕಲ್ಪ ಯಾತ್ರೆ ಸಲುವಾಗಿ ವಿಜಯಪುರಕ್ಕೆ ತೆರಳಿದ್ದ ಅರುಣ್ ಸಿಂಗ್, ಮಂಗಳವಾರ ಸಂಜೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾಲೀಕತ್ವದ ಹೈಪರ್ ಮಾರ್ಟ್ ಗೆ ಭೋಜನಕ್ಕಾಗಿ ಅರುಣ್ ಸಿಂಗ್ ಅವರನ್ನು ಆಹ್ವಾನಿಸಲಾಗಿದ್ದು, ಈ ವೇಳೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.