ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪಶ್ಚಿಮ ಬಂಗಾಳ ಸರ್ಕಾರ ಪರಿಹಾರ ಮೊತ್ತ ನೀಡುತ್ತಿದ್ದು, ಪರಿಹಾರದ ಹಣದಲ್ಲಿ 2 ಸಾವಿರ ರೂಪಾಯಿ ನೋಟು ನೀಡುತ್ತಿರುವುದನ್ನ ವಿರೋಧಿಸಿ ಭಾರತೀಯ ಜನತಾ ಪಕ್ಷದ ಪಶ್ಚಿಮ ಬಂಗಾಳದ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ವಾಗ್ದಾಳಿ ನಡೆಸಿದರು. ಆರ್ ಬಿ ಐ 2 ಸಾವಿರ ರೂಪಾಯಿ ನೋಟನ್ನು ಹಿಂತೆದುಕೊಳ್ಳಲು ಪ್ರಕಟಣೆ ಹೊರಡಿಸಿದ ಬಳಿಕ ಪರಿಹಾರ ಹಣದಲ್ಲಿ ಪಶ್ಚಿಮ ಬಂಗಾಳ ಸಚಿವರೊಬ್ಬರು ಸಂತ್ರಸ್ತರಿಗೆ 2ಸಾವಿರ ರೂಪಾಯಿ ನೋಟು ನೀಡುತ್ತಿದ್ದಾರೆಂದು ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಅವರು ಪೋಸ್ಟ್ ಮಾಡಿದ್ದು, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕುಟುಂಬವೊಂದು 2,000 ರೂಪಾಯಿ ನೋಟುಗಳನ್ನು ಹೊಂದಿರುವ ನಗದು ಬಂಡಲ್‌ಗಳನ್ನು ಹಿಡಿದಿರುವುದನ್ನು ತೋರಿಸುತ್ತದೆ. ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ನಂತರ ಪರಿಹಾರವಾಗಿ ಹಣವನ್ನು ಸ್ವೀಕರಿಸಿದ್ದಾರೆಂದು ಮಜುಂದಾರ್ ಹೇಳಿದ್ದಾರೆ.
”ಮಮತಾ ಬ್ಯಾನರ್ಜಿ ಅವರ ಸೂಚನೆ ಮೇರೆಗೆ ರಾಜ್ಯದ ಸಚಿವರೊಬ್ಬರು ತೃಣಮೂಲ ಪಕ್ಷದ ವತಿಯಿಂದ ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ರೂ. ಆರ್ಥಿಕ ನೆರವು ನೀಡುತ್ತಿದ್ದಾರೆ. ಇದನ್ನು ನಾನು ಶ್ಲಾಘಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ನಾನೂ ಕೂಡ ಈ ಪ್ರಶ್ನೆಯನ್ನು ಇಡುತ್ತಿದ್ದೇನೆ. 2000 ರೂಪಾಯಿ ನೋಟುಗಳ ಬಂಡಲ್‌ನ ಮೂಲ ಯಾವುದು?” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬ್ಯಾಂಕ್‌ಗಳಲ್ಲಿ ಕರೆನ್ಸಿ ನೋಟು ವಿನಿಮಯ ಪ್ರಕ್ರಿಯೆ ನಡೆಯುತ್ತಿದ್ದು ಸಂತ್ರಸ್ತರ ಕುಟುಂಬಗಳಿಗೆ 2000 ರೂಪಾಯಿ ನೋಟು ನೀಡುವುದು ಒಳ್ಳೆಯ ನಿರ್ಧಾರವೇ? ಎಂದು ಮಜುಂದಾರ್ ಕೇಳಿದ್ದಾರೆ.
ಅಸಹಾಯಕ ಕುಟುಂಬಗಳಿಗೆ 2000 ರೂಪಾಯಿ ನೋಟುಗಳನ್ನು ನೀಡಿ ಆ ಕುಟುಂಬಗಳ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದಂತಲ್ಲವೇ? ಎರಡನೆಯದಾಗಿ, ಟಿಎಂಸಿ ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಇದು ಒಂದು ಮಾರ್ಗವಲ್ಲವೇ?” ಎಂದಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ 2000 ರೂಪಾಯಿ ನೋಟುಗಳ ಪೂರೈಕೆ ಕಡಿಮೆಯಾಗಿದ್ದು, ಬ್ಯಾಂಕ್ ಗಳ ಮೂಲಕ ವಿನಿಮಯ ಪ್ರಕ್ರಿಯೆ ನಡೆಯುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇ 19 ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.