
ನವದೆಹಲಿ: ರೈತರ ಬಗ್ಗೆ ಬಿಜೆಪಿ ಸಂಸದೆ ಕಂಗನಾ ರನೌತ್ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಛೀಮಾರಿ ಹಾಕಿದೆ.
ರೈತರ ಪ್ರತಿಭಟನೆಯ ವೇಳೆ ಶವಗಳನ್ನು ನೇತು ಹಾಕಲಾಗಿತ್ತು. ರೈತರ ಧರಣಿಯ ವೇಳೆ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಮೂರು ಕಾನೂನುಗಳನ್ನು ಹಿಂಪಡೆದರೂ ರೈತರ ಧರಣಿ ಮುಂದುವರೆದಿದೆ. ಪಟ್ಟಭದ್ರ ಹಿತಾಸಕ್ತಿ, ವಿದೇಶಿ ಶಕ್ತಿಗಳ ಪ್ರೇರಣೆಯಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಆಗಿದ್ದೆ ಭಾರತದಲ್ಲಿಯೂ ಸಂಭವಿಸುತ್ತಿತ್ತು ಎಂದು ಕಂಗನಾ ವಿವಾದಿತ ಹೇಳಿಕೆ ನೀಡಿದ್ದಾರೆ.
ಇಂತಹ ಹೇಳಿಕೆಗಳಿಗೆ ಪಕ್ಷದ ಸಮ್ಮತಿ ಇಲ್ಲ. ಇಂತಹ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಬಿಜೆಪಿ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ.
ರೈತರ ಪ್ರತಿಭಟನೆ ಕುರಿತಂತೆ ಕಂಗನಾ ರಣಾವತ್ ಹೇಳಿಕೆ ವಿವಾದಕ್ಕೆ ಕಾರಣವಾದ ನಂತರ ಅವರಿಗೆ ಬಿಜೆಪಿ ನಾಯಕತ್ವವು ಛೀಮಾರಿ ಹಾಕಿದೆ. ಖಂಡನೆಯೊಂದಿಗೆ ಸ್ಪಷ್ಟೀಕರಣ ನೀಡಿದ್ದು, ಕಂಗನಾ ರಣಾವತ್ ಅವರ ಹೇಳಿಕೆಗಳು ಪಕ್ಷದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಘೋಷಿಸಿದೆ.
ಪಕ್ಷದ ಪರವಾಗಿ ನೀತಿ ವಿಷಯಗಳ ಬಗ್ಗೆ ಮಾತನಾಡಲು ಕಂಗನಾ ರಣಾವತ್ ಅವರಿಗೆ ಅಧಿಕಾರವಿಲ್ಲ ಮತ್ತು ಹಾಗೆ ಹೇಳಿಕೆ ನೀಡಲು ಅನುಮತಿ ನೀಡಲಾಗಿಲ್ಲ. ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ಕಂಗನಾ ಅವರಿಗೆ ಸೂಚಿಸಿದೆ ಎಂದು ಬಿಜೆಪಿ ತಿಳಿಸಿದೆ.