ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ಬಂಡಾಯ ಶಮನಕ್ಕೆ ಆರ್.ಎಸ್.ಎಸ್ ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ನಾಯಕರನ್ನೊಳಗೊಂಡಂತೆ ಮಹತ್ವದ ಸಭೆ ಕರೆದಿದೆ.
ಬಿಜೆಪಿ ನಾಯಕರಲ್ಲಿನ ಅಸಮಾಧಾನ, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವ ನಾಯಕರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಆರ್.ಎಸ್.ಎಸ್ ಮುಖಂಡರು ನಾಳೆ ಸೆ.12ರಂದು ಸಭೆ ಕರೆದಿದ್ದಾರೆ.
ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣಕ್ಕೆ ಆಹ್ವಾನ ನೀಡಲಾಗಿದೆ. ಸಭೆಗೆ ಒಟ್ಟು 40ಕ್ಕೂ ಹೆಚ್ಚು ನಾಯಕರನ್ನು ಆಹ್ವಾನಿಸಲಾಗಿದೆ.
ವಿಧಾನಸಭಾ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿ ನಾಯಕರ ನಡುವೆ ಬಿರುಕುಂಟಾಗಿದ್ದು, ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಗ್ಗೆ ಕೆಲ ಹಿರಿಯ ನಾಯಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಗೂ ಬಂಡಾಯ ನಾಯಕರ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಆರ್.ಎಸ್.ಎಸ್ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.