ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್, ತಾವು ಹೆಲಿಕ್ಯಾಪ್ಟರ್ ನಲ್ಲಿ ಮೀನೂಟ ಸವಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.
ಚೈತ್ರ ನವರಾತ್ರಿ ಸಂದರ್ಭದಲ್ಲಿ ಮೀನೂಟ ಸೇವಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ತೇಜಸ್ವಿ ಯಾದವ್ ಒಬ್ಬ ‘ಸೀಸನಲ್ ಸನಾತನಿ’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಬಿಹಾರದ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಶ್ರಾವಣದಲ್ಲಿ ತೇಜಸ್ವಿ ಯಾದವ್ ಕುರಿಮಾಂಸದ ಔತಣ ಕೂಟ ಏರ್ಪಡಿಸಿದ್ದರು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಟೀಕೆಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ತೇಜಸ್ವಿ ಯಾದವ್, ವಿರೋಧಿಗಳ ಹಾಗೂ ಕೆಲ ಮಾಧ್ಯಮಗಳ ಐಕ್ಯೂ ಮಟ್ಟ (ಬುದ್ದಿಮತ್ತೆ) ಎಷ್ಟಿದೆ ಎಂಬುದನ್ನು ನಾವು ಪರೀಕ್ಷಿಸಬೇಕಿತ್ತು, ಅದರಲ್ಲಿ ಯಶಸ್ವಿಯಾಗಿದ್ದೇವೆ. 9 ದಿನಗಳ ಕಠಿಣ ವ್ರತ ಆರಂಭವಾಗುವ ಒಂದು ದಿನ ಮೊದಲು ಅಂದರೆ ಏಪ್ರಿಲ್ 8ರಂದು ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದರೂ ಸಹ ತಪ್ಪು ದಾರಿಗೆಳೆಯಲು ಯತ್ನಿಸಿ ಈಗ ಸಾರ್ವಜನಿಕರ ಮುಂದೆ ತಮ್ಮ ನಿಜ ಬಣ್ಣ ತೋರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.