ನವದೆಹಲಿ: ಸ್ಯಾಮ್ ಪಿತ್ರೋಡಾ ಅವರನ್ನು ಕಾಂಗ್ರೆಸ್ ಬುಧವಾರ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿದೆ.
ಅವರ ಹೇಳಿಕೆ ವಿವಾದಕ್ಕೆ ಕಾರಣವಾದ ನಂತರ ಮೇ 8 ರಂದು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ ನೀಡಿದ್ದರು.
ಅವರು ರಾಜೀನಾಮೆ ನೀಡಿದಾಗಲೇ ಮತ್ತೆ ತಮ್ಮ ಸ್ಥಾನಕ್ಕೆ ಮರಳುವ ಬಗ್ಗೆ ಆಗಲೇ ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದರು. ಸಂದರ್ಶನವೊಂದರಲ್ಲಿ ಪ್ರಧಾನಿ ಮಾತನಾಡುತ್ತಾ, ಕಾಂಗ್ರೆಸ್ ನಡೆ ಬಗ್ಗೆ ಟೀಕಿಸಿದ್ದರು. ತಮ್ಮ ಹೇಳಿಕೆಗಳ ಬಗ್ಗೆ ವಿವಾದದ ನಂತರ ಪಿತ್ರೋಡಾ ರಾಜೀನಾಮೆ ನೀಡಿದ್ದರೂ ಅವರು ಮುಖ್ಯವಾಹಿನಿಯಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾರೆ. ಇದು ಕಾಂಗ್ರೆಸ್ ನಿಲುವು ಎಂದು ಹೇಳಿದ್ದರು.
ಮೋದಿ ಈ ಮೊದಲೇ ಊಹಿಸಿದಂತೆಯೇ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೋಡಾ ಅವರನ್ನು ಮರುನೇಮಕ ಮಾಡಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಪಕ್ಷದ ಈ ನಡೆ ಬಗ್ಗೆ ಲೇವಡಿ ಮಾಡಿದ್ದಾರೆ. ಪ್ರಧಾನಿ ಮೋದಿ ಈ ಕ್ರಮವನ್ನು ಈ ಮೊದಲೇ ನಿರೀಕ್ಷಿಸಿದ್ದರು ಎಂದು ತಿಳಿಸಿದ್ದಾರೆ.
ಪಿತ್ರೋಡಾ ಮರು ನೇಮಕವನ್ನು ಬಿಜೆಪಿ ಟೀಕಿಸಿದ್ದು, ಕಾಂಗ್ರೆಸ್ ಪಕ್ಷವು ಜನರ ನಂಬಿಕೆಗೆ ದ್ರೋಹ ಮಾಡಿದೆ ಎಂದು ಆರೋಪಿಸಿದೆ.
ಪೂರ್ವದಲ್ಲಿರುವ ಭಾರತೀಯರು ಚೀನಿಯರನ್ನು ಹೋಲುತ್ತಾರೆ. ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ ಎಂಬ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ನಂತರ ಸ್ಯಾಮ್ ಪಿತ್ರೋಡಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೇ 8 ರಂದು ರಾಜೀನಾಮೆ ನೀಡಿದ್ದರು.