ನವದೆಹಲಿ: ಮೊದಲ ಹಂತದ ಮತದಾನ ಪ್ರಾರಂಭವಾಗುವ ಒಂದು ವಾರದ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರಣಾಳಿಕೆಯನ್ನು ‘ವಿಕ್ಷಿತ್ ಭಾರತ್ ಕಾ ಸಂಕಲ್ಪ್’ ಎಂದು ಕರೆದರು. ಮುಂದಿನ 5 ವರ್ಷಗಳ ಕಾಲ ಉಚಿತ ಪಡಿತರ ಯೋಜನೆ ಮುಂದುವರಿಯುವುದು ಮೋದಿಯವರ ಗ್ಯಾರಂಟಿ ಎಂದರು.
ಈಗ ನಾವು ಕೋಟ್ಯಂತರ ಕುಟುಂಬಗಳ ವಿದ್ಯುತ್ ಬಿಲ್ ಅನ್ನು ಶೂನ್ಯಕ್ಕೆ ಇಳಿಸುವ ಮತ್ತು ವಿದ್ಯುತ್ ನಿಂದ ಗಳಿಸುವ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಾವು ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.
ಸಂಕಲ್ಪ ಪತ್ರವು ಅಭಿವೃದ್ಧಿ ಹೊಂದಿದ ಭಾರತದ ನಾಲ್ಕು ಸ್ತಂಭಗಳನ್ನು ಸಶಕ್ತಗೊಳಿಸುತ್ತದೆ: ಯುವಕರು, ಬಡವರು, ರೈತರು ಮತ್ತು ಮಹಿಳೆಯರು. ಹೂಡಿಕೆಯ ಮೂಲಕ ಜೀವನ ಮತ್ತು ಉದ್ಯೋಗಗಳ ಘನತೆಯ ಮೇಲೆ ನಮ್ಮ ಗಮನವಿದೆ ಎಂದು ಪ್ರಧಾನಿ ಹೇಳಿದರು.
ನಾವು ಸಾಕಷ್ಟು ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸಲಿದ್ದೇವೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಬಗ್ಗೆ ಕ್ರಮ ವಹಿಸಲಾಗುವುದು. ಆಯುಷ್ಮಾನ್ ಯೋಜನೆಯಡಿ 5 ಲಕ್ಷ ರೂಪಾಯಿಗಳ ಚಿಕಿತ್ಸೆ ಲಭ್ಯವಾಗಲಿದೆ ಎಂದು ಪ್ರಧಾನಿ ಹೇಳಿದರು.