ಚಾಮರಾಜನಗರ: ರಾಜ್ಯದಲ್ಲಿ 40% ಸರ್ಕಾರ ಇರುವುದು 5 ವರ್ಷದ ಮಕ್ಕಳಿಗೂ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಗರಣಗಳ ದೊಡ್ಡಪಟ್ಟಿಯೇ ಇದೆ ಎಂದು ಟೀಕಿಸಿದ್ದಾರೆ.
ಎರಡು ಸಾವಿರ ಕೋಟಿ ರೂ. ಕೊಟ್ಟರೆ ಸಿಎಂ ಸ್ಥಾನ ಎಂದು ಬಿಜೆಪಿ ಶಾಸಕ ಹೇಳುತ್ತಾರೆ. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆದರೂ, ಪ್ರಧಾನಿ ಮೋದಿ ಒಂದೇ ಒಂದು ಮಾತು ಆಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಪ್ರಶ್ನೆಗಳನ್ನು ಕೇಳುತ್ತೇನೆ. ಕರ್ನಾಟಕ -ಮಹಾರಾಷ್ಟ್ರ ಗಡಿ ಗಲಾಟೆ ವೇಳೆ ಪ್ರಧಾನಿ ಮಾತನಾಡಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರದ ಕುರಿತು ಮಾತನಾಡುವಂತೆ ಮೋದಿಯವರಿಗೆ ಮನವಿ ಮಾಡುತ್ತೇನೆ. ಅಂತರರಾಜ್ಯ ಕುಡಿಯುವ ನೀರಿನ ಸಮಸ್ಯೆಗೆ ಏನು ಕ್ರಮ ಕೈಗೊಂಡಿದ್ದೀರಿ? ಕರ್ನಾಟಕದಲ್ಲಿ ಪ್ರವಾಹದ ವೇಳೆ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರಿಂದ ಜಿಎಸ್‌ಟಿ ಸಂಗ್ರಹಿಸಲಾಗುತ್ತಿದೆ. ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ಸಣ್ಣ ಉದ್ಯಮಗಳು ಮುಚ್ಚುತ್ತಿವೆ ಎಂದ ಅವರು, ಬಿಜೆಪಿ ಲೂಟಿ ಮಾಡಿರುವ ಹಣವನ್ನು ಜನರಿಗೆ ಹಿಂತಿರುಗಿಸುತ್ತೇವೆ. 40% ಕಮಿಷನ್ ಪಡೆದಿರುವ ಹಣ ಕಾಂಗ್ರೆಸ್ ಪಕ್ಷ ವಾಪಸ್ ನೀಡಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬಂದರೆ ಜನರ ಹಣ ಹಿಂತಿರುಗಿಸುತ್ತೇವೆ ಎಂದು ಚಾಮರಾಜನಗರದಲ್ಲಿ ಚುನಾವಣಾ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.