ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಲಬುರಗಿಯಯಲ್ಲಿ ಬಿಜೆಪಿ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11:30ಕ್ಕೆ ಜಗತ್ ಸರ್ಕಲ್ ನಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನಂತರ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ರವಿಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.
ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ನಲ್ಲಿ ಹೆಸರು ಉಲ್ಲೇಖವಾಗಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು. ಐವಾನ್ ಐ ಶಾಹಿ ಬಡಾವಣೆಯಲ್ಲಿರುವ ಲುಂಬಿನಿ ನಿವಾಸಕ್ಕೆ ಬಿಜೆಪಿ ನಾಯಕರು ಮುತ್ತಿಗೆ ಹಾಕಲಿದ್ದಾರೆ. ಕಲಬುರಗಿಯಲ್ಲಿ ಇಂದು ಪ್ರತಿಭಟನೆಯಲ್ಲಿ ಭಾಗವಹಿಸಲು ರಾಜ್ಯ ಬಿಜೆಪಿ ನಾಯಕರ ದಂಡೇ ಆಗಮಿಸಲಿದೆ.