
ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗಿದೆ. ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲಿದೆ. ಆದರೆ ಬಿಜೆಪಿ ಮಿತ್ರಪಕ್ಷ ಜೆಡಿಎಸ್ ಮಾತ್ರ ಧರಣಿಯಿಂದ ದೂರ ಉಳಿದಿದೆ.
ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ರಾಜ್ಯ ಬಿಜೆಪಿ ಘಟಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈಗಾಗಲೇ ಪ್ರತಿಭಟನೆ ಆರಂಭವಾಗಿದೆ. ಮಿತ್ರ ಪಕ್ಷ ಜೆಡಿಎಸ್ ಈ ಪ್ರತಿಭಟನೆಗೆ ಬೆಂಬಲಿಸಿಲ್ಲ. ಪ್ರತಿಭಟನೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವೆ ಒಮ್ಮತ ಮೂಡಿಲ್ಲ ಎನ್ನಲಾಗಿದೆ. ಹಾಗಾಗಿ ಬಿಜೆಪಿ ಮಾತ್ರ ಒಂಟಿಯಾಗಿ ಪ್ರತಿಭಟನೆ ನಡೆಸುತ್ತಿದೆ.
ಸರ್ಕರದ ವಿರುದ್ಧ ಧರಣಿ, ಪ್ರತಿಭಟನೆಗಳ ಬಗ್ಗೆ ಜೆಡಿಎಸ್ ನಾಯಕರಿಗೆ ಮಾಹಿತಿಯೇ ಇಲ್ಲವಂತೆ. ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದ್ದ ಬಿಜೆಪಿ-ಜೆಡಿಎಸ್ ಸದಸ್ಯರು ಇದೀಗ ಬೆಲೆ ಏರಿಕೆ ನೀತಿ ವಿರುದ್ಧ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಲ್ಲಿ ವಿಫಲವಾಗಿವೆ. ಈ ಬಗ್ಗೆ ಜೆಡಿಎಸ್ ಸದಸ್ಯರು ಕೇಂದ್ರ ಸಚಿವ ಹೆಚ್.ಡಿ.ಕುಮರಸ್ವಾಮಿ ಅವರಿಗೆ ದೂರು ನೀಡಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ.