
ಬೆಂಗಳೂರು: ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ಎಸ್.ಸಿ.ಪಿ., ಟಿ.ಎಸ್.ಪಿ. ಅನುದಾನವನ್ನು ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಸುವ ಮೂಲಕ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯ ಸರ್ಕಾರದ ನಡೆಯ ವಿರುದ್ಧ ಮಾರ್ಚ್ 1 ಮತ್ತು 2ರಂದು ರಾಜ್ಯಾದ್ಯಂತ ಹೋರಾಟ ಕೈಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್, ಮಾಜಿ ಸಚಿವ ಬಿ. ಶ್ರೀರಾಮುಲು, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಮುನಿಸ್ವಾಮಿ ಹಾಗೂ ಪಕ್ಷದ ನಾಯಕರದ ಎನ್. ನಾರಾಯಣಸ್ವಾಮಿ, ಪಿ. ರಾಜೀವ್, ಎನ್. ರವಿಕುಮಾರ್ ಸೇರಿ ಪ್ರಮುಖ ನಾಯಕರ ನೇತೃತ್ವದಲ್ಲಿ 14 ತಂಡಗಳನ್ನು ಬಿಜೆಪಿ ರಚಿಸಿದೆ. ಪ್ರತಿ ತಂಡದಲ್ಲಿ 8 ರಿಂದ 10 ಪ್ರಮುಖರಿದ್ದು, ಪ್ರತಿ ತಂಡವು ಎರಡು ಜಿಲ್ಲೆಗಳಲ್ಲಿ ನಡೆಯುವ ಪ್ರತಿಭಟನೆ ಮತ್ತು ಜನಾಂದೋಲನದಲ್ಲಿ ಭಾಗವಹಿಸಲಿದೆ.