
ಬೆಂಗಳೂರು: ಇಂದಿನಿಂದ ವಿಧಾನಸೌಧದಲ್ಲಿ ಬಜೆಟ್ ಆಧಿವೇಶನ ಆರಂಭವಾಗಲಿದೆ. ಆದರೆ ವಿಪಕ್ಷ ಬಿಜೆಪಿ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ ಪ್ರಾರಂಭಿಸಿದೆ.
ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಅಧಿವೇಶನದ ಮೊದಲ ದಿನವೇ ವಿಪಕ್ಷ ನಾಯಕ ಅರ್.ಅಶೋಕ್ ನೇತೃತ್ವದಲ್ಲಿ ವಿಧಾನಸೌಧದ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ. ಒಂದು ಕಡೆ ಅಪಮಾನ ಮಾಡಿದರೆ, ಮತ್ತೊಂದು ಕಡೆ ಅವರಿಂದಲೇ ಸರ್ಕಾರಕ್ಕೆ ಮೆಚ್ಚುಗೆ ಹೇಳುವ ಮಾತನ್ನು ಆಡಿಸಲಾಗುತ್ತಿದೆ. ಇದನ್ನು ವಿರೋಧಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ರಾಜ್ಯ ಪಾಲರು ಮಸೂದೆಗಳಿಗೆ ಸ್ಪಷ್ಟನೆ ಕೇಳಿ ವಾಪಾಸ್ ಕಳುಹಿಸಿದರೆ ಅದಕ್ಕೆ ಸರ್ಕಾರದಿಂದ ಯಾವುದೇ ಸ್ಪಷ್ಟ ಉತ್ತರವಿಲ್ಲ. ಸರ್ಕಾರದ ಈ ಧೋರಣೆ ಖಂಡನೀಯವಾಗಿದೆ ಎಂದು ಕಿಡಿಕಾರಿದರು.