ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೇ 26 ಕ್ಕೆ 8 ವರ್ಷ ಪೂರ್ಣಗೊಳ್ಳಲಿದೆ. ಎರಡನೇ ಅವಧಿಯಲ್ಲಿ ಅವರು ಪ್ರಧಾನಿಯಾಗಿ ಮೇ 30 ಕ್ಕೆ 3 ವರ್ಷ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಮೇ 30 ರಿಂದ 15 ದಿನಗಳ ಕಾಲ ದೇಶ ವ್ಯಾಪಿ ಅಭಿಯಾನ ಕೈಗೊಳ್ಳಲಾಗಿದೆ.
ಮೋದಿ ಪ್ರಧಾನಿಯಾಗಿ 8 ವರ್ಷ ಪೂರ್ಣಗೊಳಿಸಲಿರುವ ಹಿನ್ನೆಲೆಯಲ್ಲಿ ಮೇ 30 ರಿಂದ ಜೂನ್ 15 ರವರೆಗೆ ದೇಶಾದ್ಯಂತ 15 ದಿನಗಳ ಕಾಲ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು, ರಿಪೋರ್ಟ್ ಕಾರ್ಡ್ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲು ಬಿಜೆಪಿ ಮುಂದಾಗಿದೆ.
ದುರ್ಬಲ ವರ್ಗದವರಿಗೆ ಮೋದಿ ಸರ್ಕಾರ ಕೈಗೊಂಡ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲಾಗುವುದು. ‘8 ವರ್ಷಗಳ ಸೇವೆ, ಉತ್ತಮ ಆಡಳಿತ -ಬಡವರ ಕಲ್ಯಾಣ’ ಹೆಸರಿನಲ್ಲಿ 15 ದಿನಗಳ ಕಾಲ ಅಭಿಯಾನ ಕೈಗೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೂಚಿಸಿದ್ದಾರೆ.