ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು 2024 ರ ಲೋಕಸಭೆ ಚುನಾವಣೆಯವರೆಗೆ ಪಕ್ಷದ ಮುಖ್ಯಸ್ಥರಾಗಿ ಮುಂದುವರೆಸಲಾಗುವುದು.
ಜೆ.ಪಿ. ನಡ್ಡಾ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮುಂದುವರೆಸಲು ಅವರ ಅವಧಿ ವಿಸ್ತರಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ಅಸೆಂಬ್ಲಿ ಚುನಾವಣೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಹೊರಬಿದ್ದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಡ್ದಾ ಅವರ ಮೂರು ವರ್ಷಗಳ ಅಧಿಕಾರಾವಧಿಯು ಜನವರಿ 20, 2023 ರಂದು ಕೊನೆಗೊಳ್ಳಲಿದೆ. ನಡ್ಡಾ ಅವರನ್ನು ಜುಲೈ 2019 ರಲ್ಲಿ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 20 ಜನವರಿ 2020 ರಂದು ಪೂರ್ಣ ಸಮಯದ ಅಧ್ಯಕ್ಷರಾಗಿ ಅಧಿಕಾರ ಅವರು ವಹಿಸಿಕೊಂಡರು.
ಬಿಜೆಪಿಯ ಸಂವಿಧಾನದ ಪ್ರಕಾರ, ಪಕ್ಷದ ಅಧ್ಯಕ್ಷರು ತಲಾ ಮೂರು ವರ್ಷಗಳಂತೆ ಸತತ ಎರಡು ಅವಧಿಯನ್ನು ಪಡೆಯಬಹುದು. ಅದೇ ರೀತಿ ಕನಿಷ್ಠ ಪಕ್ಷ ಶೇ. ಐವತ್ತರಷ್ಟು ರಾಜ್ಯ ಘಟಕಗಳಲ್ಲಿ ಸಂಘಟನೆ ಚುನಾವಣೆ ನಡೆದ ನಂತರ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಿಸಬಹುದು ಎಂಬ ನಿಬಂಧನೆ ಇದೆ.
2022ರಲ್ಲಿ ಗುಜರಾತ್, ಹಿಮಾಚಲ ಪ್ರದೇಶ ಮತ್ತು 2023ರಲ್ಲಿ ಕರ್ನಾಟಕ, ತ್ರಿಪುರಾ, ಮೇಘಾಲಯ, ಮಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಬಿಜೆಪಿ ನಾಯಕರ ಪ್ರಕಾರ, ನಡ್ಡಾ ಅವರು ಪ್ರಧಾನಿ ಮೋದಿಯವರ ವಿಶ್ವಾಸ ಹೊಂದಿದ್ದಾರೆ. ಅವರ ನಿರಂತರ ಉತ್ತಮ ಸಂಘಟನಾ ಚಟುವಟಿಕೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.