ನವದೆಹಲಿ: ಬಿಜೆಪಿ ಸಂಸದೆ ಮನೇಕಾ ಗಾಂಧಿ ಇಸ್ಕಾನ್ ಬಗ್ಗೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಹರೇ ರಾಮ ಹರೇ ಕೃಷ್ಣ ಎಂದು ಹೇಳುತ್ತಾ ಇಸ್ಕಾನ್ ಕಟುಕರಿಗೆ ಹಸುಗಳನ್ನು ಮಾರಾಟ ಮಾಡಿದೆ ಎಂದು ಮನೇಕಾ ಗಾಂಧಿ ಆರೋಪಿಸಿದ್ದಾರೆ.
ಸ್ಕಾನ್ ನಲ್ಲಿ ಹಾಲು ಕೊಡುವ ಹಸುಗಳನ್ನು ಮಾತ್ರ ಇರಿಸಲಾಗಿದೆ. ವಯಸ್ಸಾದ ದನಗಳನ್ನು ಕಟುಕರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.
ಇಸ್ಕಾನ್ ನವರು ಗೋಶಾಲೆಗಳನ್ನು ನಿರ್ಮಿಸುತ್ತಾರೆ ಹಾಗೂ ಗೋಶಾಲೆಗಳನ್ನು ನಡೆಸುವುದಕ್ಕಾಗಿ ಸರ್ಕಾರದಿಂದ ವಿಶ್ವಾದ್ಯಂತ ಪ್ರಯೋಜನಗಳನ್ನು ಪಡೆಯುತ್ತಾರೆ. ಆದರೆ ಭಾರತದಲ್ಲಿ ಅತಿ ಹೆಚ್ಚು ಬೋಗಸ್ ಹಾಗೂ ಮೋಸ ಮಾಡುವ ಸಂಸ್ಥೆ ಇದ್ದರೆ ಅದು ಇಸ್ಕಾನ್ ಎಂದು ಹೇಳಿದ್ದಾರೆ. ಇಸ್ಕಾನ್ ಅವರ ಅನಂತಪುರದ ಗೋಶಾಲೆಗೆ ಹೋಗಿದ್ದೆ. ಒಂದೇ ಒಂದು ವಯಸ್ಸಾದ ಹಸುಗಳಿಲ್ಲ. ಕರುಗಳು ಕೂಡ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ. ಇಸ್ಕಾನ್ ವಯಸ್ಸಾದ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರಿದೆ. ಇಸ್ಕಾನ್ ಕಟುಕರಿಗೆ ಮಾರಿದಷ್ಟು ಹಸುಗಳನ್ನು ಇನ್ಯಾರೂ ಮಾರಿಲ್ಲ ಎಂದು ಆಪಾದಿಸಿದ್ದಾರೆ.
ರಾಷ್ಟ್ರೀಯ ಲೋಕದಳ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ, ಮನೇಕಾ ಗಾಂಧಿ ನೀಡಿರುವ ಈ ಹೇಳಿಕೆಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಮೇನಕಾ ಗಾಂಧಿ ನೀಡಿದ್ದ ಹೇಳಿಕೆ ಈಗ ವೈರಲ್ ಆಗಿದೆ.
ಮನೇಕಾ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಠರ್ ಗೋವಿಂದ ದಾಸ್, ಮೇನಕಾ ಅವರ ಆರೋಪ ಆಧಾರರಹಿತವಾದದ್ದು. ಗೋವುಗಳು ಹಾಗೂ ಗೂಳಿಗಳ ರಕ್ಷಣೆಗಾಗಿ ಭಾರತ ಹಾಗೂ ವಿಶ್ವಾದ್ಯಂತ ಇಸ್ಕಾನ್ ಕೆಲಸ ಮಾಡುತ್ತಿದೆ. ಹಸುಗಳು ಹಾಗೂ ಗೂಳಿಗಳು ಇಸ್ಕಾನ್ ಗೋಶಾಲೆಯಲ್ಲಿ ಅವು ಬದುಕಿರುವವರೆಗೂ ಇರುತ್ತವೆ. ಒಂದೇ ಒಂದು ಹಸು ಅಥವಾ ಕರುವನ್ನು ಕೂಡ ಕಟುಕರಿಗೆ ಮಾರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.