ಬೆಂಗಳೂರು: ಪಕ್ಷ ಸಂಘಟನೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ದೇಶದಾದ್ಯಂತ ಗ್ರಾಮ ಪರಿಕ್ರಮ ಯಾತ್ರೆ ಕೈಗೊಂಡಿದೆ.
ಬಿಜೆಪಿ ರೈತ ಮೋರ್ಚಾ ವತಿಯಿಂದ ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 12ರಂದು ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗ್ರಾಮ ಪರಿಕ್ರಮ ಯಾತ್ರೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ ಎಲ್ಲಾ ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ನೀಡಲಾಗುವುದು. ಎಲ್ಇಡಿ ಮೂಲಕ ರಾಷ್ಟ್ರೀಯ ಅಧ್ಯಕ್ಷರ ಉದ್ಘಾಟನೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 30 ದಿನ ಹಳ್ಳಿಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಪ್ರಚಾರ ನಡೆಸಲಾಗುವುದು.
ಬಿಜೆಪಿ ರಾಷ್ಟ್ರೀಯ ರೈತ ಮೋರ್ಚಾ ಅಧ್ಯಕ್ಷ ರಾಜ್ ಕುಮಾರ್ ಚಾಹರ್ ಅವರ ಸೂಚನೆಯಂತೆ ರಾಜ್ಯದ ನಾಲ್ಕೈದು ನಗರ ಪ್ರದೇಶ ಹೊರತುಪಡಿಸಿ 32 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ರೈತ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಆರಂಭಕ್ಕೆ ಮೊದಲು ಗೋಪೂಜೆ ನೆರವೇರಿಸಲಾಗುವುದು. 30 ದಿನಗಳ ಕಾಲ ಗ್ರಾಮ ಪರಿಕ್ರಮ ಯಾತ್ರೆ ನಡೆಯಲಿದ್ದು, ಪ್ರತಿದಿನ ಪ್ರತಿ ಜಿಲ್ಲೆಯ ಐದು ಹಳ್ಳಿಗಳಲ್ಲಿ ಪ್ರವಾಸ ಮಾಡಲಾಗುತ್ತದೆ. ಭವಿಷ್ಯದಲ್ಲಿ ಸರ್ಕಾರದ ಯೋಜನೆ, ಪಕ್ಷದ ಪ್ರಣಾಳಿಕೆ ರೂಪಿಸುವಲ್ಲಿ ರೈತರ ಸಲಹೆ ಪಡೆಯುವುದು ಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.