ನವದೆಹಲಿ: ಮೂರನೇ ಬಾರಿಗೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ತೀವ್ರ ವಿವಾದದ ಕಾರಣ 4 ವರ್ಷಗಳಿಂದ ತಟಸ್ಥವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬತ್ತಳಿಕೆಯಿಂದ ಹೊರತೆಗೆಯಲು ಮುಂದಾಗಿದೆ.
ಲೋಕಸಭೆ ಚುನಾವಣೆಗೆ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ 2019ರ ನಿಯಮಾವಳಿ ಜಾರಿಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಕೈಗೊಂಡಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಗೃಹ ಸಚಿವಾಲಯ ಕಾರ್ಯ ಪ್ರವೃತ್ತವಾಗಿದ್ದು, ಲೋಕಸಭೆ ಚುನಾವಣೆಗೆ ಮುನ್ನ ಸಿಎಎ ದಾಳ ಉರುಳಿಸಿ ಮುಸ್ಲಿಮೇತರ ಮತಗಳಿಗೆ ಗಾಳ ಹಾಕಲು ಬಿಜೆಪಿ ಮುಂದಾಗಿದೆ.
2014ರ ಡಿಸೆಂಬರ್ 31ರವರೆಗೆ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯಗಳ ಅರ್ಹರಿಗೆ ಪೌರತ್ವ ಮಂಜೂರು ಮಾಡಲು ಇದರಿಂದ ಅನುಕೂಲವಾಗುತ್ತದೆ. ಈ ಮೂಲಕ ಚುನಾವಣೆಯಲ್ಲಿ ಮುಸ್ಲಿಂ ಹೊರತಾದ ಸಮುದಾಯಗಳ ಮತಗಳಿಗೆ ಬಿಜೆಪಿ ಗಾಳ ಹಾಕಿದೆ.
ಇದಕ್ಕೆ ವಿಪಕ್ಷಗಳು ಕಿಡಿಕಾರಿವೆ. ನಾಲ್ಕು ವರ್ಷಗಳಿಂದ ತಟಸ್ಥವಾಗಿದ್ದ ಈ ವಿಚಾರವನ್ನು ಚುನಾವಣೆ ಸಮೀಪಿಸುತ್ತಿರುವಂತೆ ಹರಿಬಿಡಲಾಗಿದೆ. ರಾಜಕೀಯ ಅಸ್ತ್ರವಾಗಿ ಸಿಎಎ ಬಳಸುವ ಉದ್ದೇಶ ಇದರ ಹಿಂದಿದೆ ಎಂದು ವಿಪಕ್ಷಗಳು ಟೀಕಿಸಿವೆ. ಡಿಸೆಂಬರ್ 27ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಯಾರಿಂದಲೂ ಸಿಎಎ ಜಾರಿ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದರು.