ಹುಬ್ಬಳ್ಳಿ: ರಾಜ್ಯ ಬಿಜೆಪಿಯಲ್ಲಿ ಲಿಂಗಾಯಿತರಿಗೆ ನಾಯಕತ್ವ ಕೊಡಬೇಕು. ಲಿಂಗಾಯಿತರನ್ನು ತುಳಿದಿದ್ದೇ ವಿಧಾನಸಭೆ ಚುನಾವಣೆ ಸೋಲಿಗೆ ಕಾರಣ ಎಂದು ಬಿಜೆಪಿ ಎಂಎಲ್ ಸಿ ಪ್ರದೀಪ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಶೆಟ್ಟರ್, ಬಿಜೆಪಿಯಲ್ಲಿ ಲಿಂಗಾಯಿತ ನಾಯಕರನ್ನು ತುಳಿಯುತ್ತಿದ್ದಾರೆ. ಹಾಗಾಗಿ ಲಿಂಗಾಯಿತ ನಾಯಕರು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಲೋಕಸಭಾ ಚುನಾವಣೆಗೆ ಲಿಂಗಾಯಿತ ನಾಯಕರಿಗೆ ಹೆಚ್ಚು ಟಿಕೆಟ್ ಕೊಟ್ಟರೆ ಪಕ್ಷ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ನಾಯಕತ್ವದ ಕೊರತೆ ಇದೆ. ಪಕ್ಷಕ್ಕೆ ನಾಯಕರೇ ಇಲ್ಲದಂತಾಗಿದೆ. ನಾವು ಯಾರ ಬಳಿ ಹೇಳಿಕೊಳ್ಳಬೇಕು? ವಿಪಕ್ಷ ನಾಯಕನ ಆಯ್ಕೆ, ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿದೆ. ಕಾರಣ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದರು. ಬಿಜೆಪಿಯಲ್ಲಿ ಇರುವುದೇ ಅಲ್ಪಸ್ವಲ್ಪ ಲಿಂಗಾಯಿತ ನಾಯಕರು. ಅವರನ್ನೂ ಅವೈಡ್ ಮಾಡಿದರೆ ಬಿಜೆಪಿ ಕೆಟ್ಟಸ್ಥಿತಿಗೆ ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿಯನ್ನು ಬದಲಾಯಿಸಬೇಕು ಎಂದು ಹೇಳಿದರು.