
ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ಮಾಡಿರುವ ಕ್ರಮ ಖಂಡಿಸಿ ಬಿಜೆಪಿ ನಾಯಕರು ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಅಮಾನತುಗೊಂಡಿರುವ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ತಕ್ಷ ಸ್ಪೀಕರ್ ಖಾದರ್ ಶಾಸಕರ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸ್ಪೀಕರ್ ಹುದ್ದೆ ಯಾವುದೇ ಧರ್ಮಾಧಾರಿತ, ಪಕ್ಷಾಧಾರಿತ ಅಲ್ಲ, ಜನರಿಂದ ಆಯ್ಕೆಯಾದಂತಹ ಶಾಸಕರನ್ನು ಅಮಾನತು ಮಾಡುವ ಮೂಲಕ ಸ್ಪೀಕರ್ ಯು.ಟಿ.ಖಾದರ್ ಮತೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸ್ಪೀಕರ್ ಪೀಠದ ಬಳಿ ಧರ್ಮ ಗುರುಗಳನ್ನು, ಹೋರಾಟಗಾರರನ್ನು ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುತ್ತಾರೆ. ಶಾಸಕರನ್ನು ಸ್ಪೀಕರ್ ಪೀಠದತ್ತ ಕರೆಸಿದ್ದೂ ಅವರೇ. ಇದೆಲ್ಲ ತಪ್ಪಲ್ಲ. ಆದರೆ ನಾವು ಸ್ಪೀಕರ್ ಪೀಠದ ಬಳಿ ನಿಂತು ಪ್ರತಿಭಟನೆ ಮಾಡಿದ್ದು ತಪ್ಪು. ಇಷ್ಟಕ್ಕೆ ಸಂವಿಧಾನ ಬಾಹಿರವಾಗಿ 18 ಶಾಸಕರನ್ನು ಆರು ತಿಂಗಳು ಅಮಾನತು ಮಾಡಿದ್ದಾರೆ ಇದು ಸರಿಯಲ್ಲ. ತಕ್ಷಣ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಕಿಡಿಕಾರಿದರು.