ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿವಿಲ್ ದಾವೆ ಹಿನ್ನಲೆಯಲ್ಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
204 ಕೋಟಿ ರೂ. ಪರಿಹಾರ ಕೋರಿದ್ದ ದಾವೆ ವರ್ಗಾವಣೆ ಕೋರಿ ಹೈಕೋರ್ಟ್ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅರ್ಜಿ ಸಲ್ಲಿಸಿದ್ದಾರೆ. ತಮಗೆ ಕಿರುಕುಳ ನೀಡುವ ಉದ್ದೇಶದಿಂದ ಕನಕಪುರದಲ್ಲಿ ದಾವೆ ಹೂಡಿದ್ದಾರೆ. ಕನಕಪುರದಲ್ಲಿ ವಿಚಾರಣೆಗೆ ಹಾಜರಾದರೆ ದಾಳಿ ನಡೆಸಬಹುದು. ಕನಕಪುರದಿಂದ ಬೆಂಗಳೂರಿಗೆ ದಾವೆ ವರ್ಗಾಯಿಸಲು ಯತ್ನಾಳ್ ಮನವಿ ಮಾಡಿದ್ದಾರೆ.
ಪ್ರತಿವಾದಿ ಡಿ.ಕೆ. ಶಿವಕುಮಾರ್ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇಡಿ ಕೇಸ್ ನಿಂದ ಪಾರಾಗಲು ಡಿ.ಕೆ. ಶಿವಕುಮಾರ್ ಲಾಬಿ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದರು. ಡಿ.ಕೆ. ಶಿವಕುಮಾರ್ ವಿರುದ್ಧ 2019ರ ಜೂನ್ 23ರಂದು ಯತ್ನಾಳ್ ಹೇಳಿಕೆ ನೀಡಿದ್ದರು. ಹೇಳಿಕೆಯಿಂದ ಮಾನನಷ್ಟವಾಗಿದೆ ಎಂದು ಡಿ.ಕೆ. ಶಿವಕುಮಾರ್ ಸಿವಿಲ್ ದಾವೆ ಹೂಡಿದ್ದರು.