ವೈದ್ಯರೊಬ್ಬರು ಮರಣೋತ್ತರ ಪರೀಕ್ಷೆ ವರದಿ ನೀಡಲು ಬಡ ವ್ಯಕ್ತಿಯಿಂದ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅವರ ವಿರುದ್ದ ಎಫ್ಐಆರ್ ದಾಖಲಿಸದ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಬ್ರಿಜ್ ಬಿಹಾರಿ ಪಟೇರಿಯಾ ಗುರುವಾರ ಸಂಜೆ ಸಾಗರ ಜಿಲ್ಲೆಯ ಪೊಲೀಸ್ ಠಾಣೆಯ ಹೊರಗೆ ಧರಣಿ ಕುಳಿತಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಹ ಮುಂದಾಗಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತುಗೊಳಿಸಲು ಮತ್ತು ಸರ್ಕಾರಿ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ಹೊರಡಿಸಿದೆ, ಇದಾದ ಬಳಿಕ ಶಾಸಕ ಬ್ರಿಜ್ ಬಿಹಾರಿ ಪಟೇರಿಯಾ ಇಂದು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ದಿಲ್ಹರಿ ಗ್ರಾಮದ ಧನಸಿಂಗ್ ಯಾದವ್ (70), ಕೆಲ ದಿನಗಳ ಹಿಂದೆ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥರು ಕೇಸಲಿ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೇಸಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್ಸಿ) ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಆದಾಗ್ಯೂ, ಸಿಎಚ್ಸಿಯ ಡಾ. ದೀಪಕ್ ದುಬೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ಕಾರಣವನ್ನು ಹಾವು ಕಡಿತ ಎಂದು ನಮೂದಿಸಲು ಮೃತರ ಸಂಬಂಧಿಕರಿಂದ 40,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಾವು ಕಡಿತದಿಂದ ಸಾವನ್ನಪ್ಪುವವರ ಕುಟುಂಬಕ್ಕೆ ರಾಜ್ಯ ಸರ್ಕಾರ ನಾಲ್ಕು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ಅವಕಾಶವಿದ್ದು, ಈ ಕಾರಣಕ್ಕಾಗಿಯೇ ವೈದ್ಯರು ಶೇ.10ರಷ್ಟು ಮೊತ್ತವನ್ನು ಲಂಚವಾಗಿ ಕೇಳಿದ್ದರು.
ಈ ಬಗ್ಗೆ ಸಂಬಂಧಿಕರು ಬಿಜೆಪಿ ಶಾಸಕ ಪಟೇರಿಯಾ ಅವರಿಗೆ ದೂರು ನೀಡಿದಾಗ ಅವರು ಕೇಸಲಿ ಠಾಣೆಗೆ ತೆರಳಿದ್ದು, ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ದೇವ್ರಿ ವಿಧಾನಸಭಾ ಕ್ಷೇತ್ರದ ಶಾಸಕರು ಠಾಣೆಯ ಹೊರಗೆ ಧರಣಿ ಕುಳಿತರು.
ಅಂತಿಮವಾಗಿ, ಮಧ್ಯರಾತ್ರಿಯ ಸುಮಾರಿಗೆ ರಾಜ್ಯ ಸರ್ಕಾರವು ಕೇಸಲಿ ಪೊಲೀಸ್ ಠಾಣೆಯ ಪ್ರಭಾರಿ ಅಜಯ್ ಕುಮಾರ್ ಬೈಗಾ ಅವರನ್ನು ಅಮಾನತುಗೊಳಿಸುವ ಆದೇಶವನ್ನು ಹೊರಡಿಸಿದ್ದಲ್ಲದೇ ಡಾ ದೀಪಕ್ ದುಬೆ ವಿರುದ್ಧ ಅಮಾನತು ಪ್ರಕ್ರಿಯೆಗಳನ್ನು ಪ್ರಾರಂಭಿಸಿತು. ವೈದ್ಯರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಆಡಳಿತಾರೂಢ ಬಿಜೆಪಿ ಶಾಸಕನಾಗಿ ಪೊಲೀಸ್ ಠಾಣೆಯ ಹೊರಗೆ ಧರಣಿ ಕುಳಿತು, ಬಡವರೊಬ್ಬರಿಗೆ ಸಹಾಯ ಮಾಡಲು ರಾಜೀನಾಮೆ ಸಲ್ಲಿಸಬೇಕಾಯಿತು ಎಂದು ಶಾಸಕ ಪಟೇರಿಯಾ ವಿಷಾದಿಸಿದ್ದಾರೆ.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಕೂಡ ವಾಗ್ದಾಳಿ ನಡೆಸಿದೆ. ಆಡಳಿತಾರೂಢ ಬಿಜೆಪಿ ಶಾಸಕರೊಬ್ಬರ ಜೊತೆ ಈ ರೀತಿ ನಡೆದುಕೊಂಡರೆ, ರಾಜ್ಯದಲ್ಲಿ ಸಾಮಾನ್ಯ ಜನರ ಸ್ಥಿತಿಯನ್ನು ಯಾರಾದರೂ ಊಹಿಸಬಹುದು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.