ದಾವಣಗೆರೆ: ಸಹೋದರನ ಮಗ ಚಂದ್ರಶೇಖರ್ ಸಾವು ಅಪಘಾತವಲ್ಲ, ಇದೊಂದು ಕೊಲೆ. ಹಿಂದುತ್ವದ ಬಗ್ಗೆ ತುಂಬಾ ಅಭಿಮಾನವನ್ನು ಹೊಂದಿದ್ದ ಆತನನ್ನು ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಕಣ್ಣಿರಿಟ್ಟಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಚಂದ್ರಶೇಖರ್ ಹಿಂದುತ್ವಕ್ಕಾಗಿ ಹೋರಾಟ ನಡೆಸುತ್ತಿದ್ದ. ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ಗಲಾಟೆ ಆದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ಎಂದರು.
ಚಂದ್ರಶೇಖರ್ ಮನೆಗೆ ಬರದೆ ಎರಡು ದಿನವಾದಾಗಲೆ ನಾವು ನಾಪತ್ತೆ ಕೇಸ್ ದಾಖಲಿಸಿದ್ದೆವು. ಈಗ ಆತನ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಆತನ ತಲೆಗೆ ಬಲವಾಗಿ ಹೊಡೆಯಲಾಗಿದೆ. ಕೈಕಾಲು ಕಟ್ಟಿಹಾಕಿದ ಸ್ಥಿತಿಯಲ್ಲಿ ಕಾರಿನ ಹಿಂಬದಿ ಸೀಟ್ ನಲ್ಲಿ ಮೃತದೇಹ ಪತ್ತೆಯಾಗಿದೆ. ಕಿವಿಗಳ ಮೇಲೂ ಹಲ್ಲೆ ನಡೆಸಲಾಗಿದೆ. ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದೇವೆ ಎಂದು ಹೇಳಿದರು.
ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಈ ಕೆಲಸ ಮಾಡಿದ್ದಾರೆ. ನನ್ನ ವೈರಿಗಳು ನನ್ನ ಬಲಿ ಪಡೆಯಬಹುದಿತ್ತು. ಆದರೆ ನನ್ನ ಮಗನನ್ನು ಬಲಿ ಪಡೆದಿದ್ದಾರೆ. ಆತ ಯಾರಿಗೆ ಏನು ಅನ್ಯಾಯ ಮಾಡಿದ್ದ? ಕೈಲಾದ ಸಹಾಯ ಮಾಡಿಕೊಂಡು ಹಿಂದುತ್ವ ವಿಚಾರಧಾರೆಗಳನ್ನು ಹೊಂದಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ.