ಬೆಂಗಳೂರು: ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಮುನಿರತ್ನ ಪೊಲೀಸರು ಬಂಧಿಸಿದ ಬಳಿಕ ಮಂಕಾಗಿದ್ದು, ಮೌನಕ್ಕೆ ಜಾರಿದ್ದಾರೆ.
ಅಶೋಕನಗರ ಠಾಣೆಗೆ ಕರೆತಂದು ಮಧ್ಯರಾತ್ರಿ ಮುನಿರತ್ನ ವಿಚಾರಣೆ ನಡೆಸಲಾಗಿದೆ. ಮಧ್ಯರಾತ್ರಿ 12ರಿಂದ 1:30ರವರೆಗೆ ಸತತ ಒಂದೂವರೆ ಗಂಟೆ ಕಾಲ ಮುನಿರತ್ನ ಅವರ ವಿಚಾರಣೆ ನಡೆಸಲಾಗಿದೆ. ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ಅವರು, ಮುನಿರತ್ನ ವಿರುದ್ಧ ದಾಖಲಾದ ಎರಡು ಎಫ್ಎಆರ್ ಸಂಬಂಧ ವಿಚಾರಣೆ ನಡೆಸಿದ್ದಾರೆ. ತನಿಖಾಧಿಕಾರಿ ಎದುರು ನಾನೇನು ಮಾಡಿಲ್ಲ, ಇದೆಲ್ಲವೂ ಷಡ್ಯಂತ್ರ ಎಂದು ಮುನಿರತ್ನ ಹೇಳಿದ್ದಾರೆನ್ನಲಾಗಿದೆ.
ಮಧ್ಯರಾತ್ರಿ ಯಲಹಂಕದ ಕೋಗಿಲು ರಸ್ತೆಯಲ್ಲಿರುವ ಜಡ್ಜ್ ಸಂತೋಷ್ ಗಜಾನನ ಭಟ್ ನಿವಾಸಕ್ಕೆ ಮುನಿರತ್ನ ಅವರನ್ನು ಹಾಜರುಪಡಿಸಲಾಗಿದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದೊಂದು ಷಡ್ಯಂತ್ರ ಎಂದು ಜಡ್ಜ್ ಎದುರು ಮುನಿರತ್ನ ಹೇಳಿದ್ದಾರೆ.
ಅವರನ್ನು ಎರಡು ದಿನ ಕಸ್ಟಡಿಗೆ ಪಡೆದ ಪೊಲೀಸರು ಠಾಣೆಗೆ ಕರೆತಂದು ರೆಸ್ಟ್ ಮಾಡಲು ಬಿಟ್ಟಿದ್ದಾರೆ. ಸರಿಯಾಗಿ ನಿದ್ದೆ ಮಾಡದೇ ಗಾಢ ಯೋಚನೆಯಲ್ಲಿರುವ ಮುನಿರತ್ನ ತಡರಾತ್ರಿ ವಿಚಾರಣೆ ಎದುರಿಸಿದ್ದಾರೆ.