ರಾಮನಗರ: ಗುತ್ತಿಗೆದಾರನಿಗೆ ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಜೈಲು ಸೇರಿದ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹನಿಟ್ರ್ಯಾಪ್ ಗೆ ಬಳಸಿಕೊಂಡ ಆರೋಪದಡಿ ದೂರು ದಾಖಲಾಗಿದೆ.
ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆ ಬುಧವಾರ ದೂರು ನೀಡಿದ್ದಾರೆ. ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿರುವ ಮಹಿಳೆ ದೂರು ನೀಡಿದ್ದು, ಮುನಿರತ್ನ, ಅವರ ಗನ್ ಮ್ಯಾನ್, ವಿಜಯಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆ ಬುಧವಾರ ಮಧ್ಯಾಹ್ನ ದೂರು ನೀಡಲು ರಾಮನಗರ ಎಸ್ಪಿ ಕಚೇರಿಗೆ ತೆರಳಿದ್ದು, ಅವರನ್ನು ವಿಚಾರಿಸಿ ಮಾಹಿತಿ ಪಡೆದ ಪೊಲೀಸರು ಕೃತ್ಯ ನಡೆದ ಸ್ಥಳ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ಹೋಗಿ ದೂರು ಕೊಡುವಂತೆ ತಿಳಿಸಿದ್ದಾರೆ.
ಕಗ್ಗಲಿಪುರ ಠಾಣೆಗೆ ಬಂದ ಮಹಿಳೆ ದೂರು ನೀಡಿದ್ದು, 2020 – 22 ರವರೆಗೆ ತನ್ನ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ದೂರು ಕೊಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದೂರು ಪರಿಶೀಲನೆ ನಡೆಸಿದ ಕಗ್ಗಲಿಪುರ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಚಿತ ಮುನಿರತ್ನ ಸ್ಥಳವೊಂದಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು. ವಿಡಿಯೋ ಮಾಡಿಟ್ಟುಕೊಂಡು ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ. ನಾನು ಹೇಳಿದಂತೆ ಕೇಳದಿದ್ದರೆ ಪತಿ, ಮಕ್ಕಳಿಗೆ ವಿಡಿಯೋ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಮತ್ತೊಬ್ಬ ಮಹಿಳೆ ಜೊತೆ ಸೇರಿ ಆತ ಹೇಳಿದವರನ್ನು ಹನಿ ಟ್ರ್ಯಾಪ್ ಮಾಡಿಸಿದ್ದಾರೆ. ಜೀವ ಬೆದರಿಕೆ, ಮರ್ಯಾದೆಗೆ ಅಂಜಿ ಆತ ಹೇಳಿದಂತೆ ಕೇಳಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.