ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿರುವ ಬಿಜೆಪಿ ಸವಾಲಿನ ಕ್ಷೇತ್ರಗಳಿಂದ ಸೋಲಿಲ್ಲದ ಸರದಾರರನ್ನು ಕಣಕ್ಕೆ ಇಳಿಸಲು ಮುಂದಾಗಿದೆ.
ಗುಜರಾತ್ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದ ಪ್ರಯೋಗಗಳ ಜೊತೆಗೆ ಸತತ ಗೆಲುವಿನಿಂದ ಸ್ವಂತ ಕ್ಷೇತ್ರದಲ್ಲಿ ಬೇರು ಬಿಟ್ಟಿರುವ ಕೆಲವು ಹಿರಿಯ ಶಾಸಕರನ್ನು ಸವಾಲಿನ ಕ್ಷೇತ್ರಗಳಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಈ ಮೂಲಕ ಹಲವು ಅಚ್ಚರಿಗಳಿಗೆ ಈ ಬಾರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಾಕ್ಷಿಯಾಗುವ ನಿರೀಕ್ಷೆ ಇದೆ.
ದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಸರಣಿ ಸಭೆಗಳನ್ನು ನಡೆಸಿದ ಬಿಜೆಪಿ ನಾಯಕರು ದಕ್ಷಿಣ ಭಾರತದ ಭದ್ರಕೋಟೆಯಾಗಿರುವ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಕೆಲವು ಪ್ರಯೋಗಗಳನ್ನು ಮಾಡಲು ಮುಂದಾಗಿದ್ದಾರೆ. ಸ್ವಂತ ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲ್ಲುವ ಹಿರಿಯ ಶಾಸಕರನ್ನು ಬೇರೆ ಕ್ಷೇತ್ರಗಳಿಗೆ ಶಿಫ್ಟ್ ಮಾಡಲಾಗುವುದು. ಅವರಿಗೆ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಹೊಸ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ವಹಿಸಲಾಗುವುದು. ಈ ಮೂಲಕ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.
ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ಕೈಗೊಂಡ ಪ್ರಯೋಗಗಳಿಂದ ಬಿಜೆಪಿ ಭದ್ರವಾಗಿ ನೆಲೆಯೂರಿದ್ದು, ಸತತವಾಗಿ ಗೆಲುವು ಸಾಧಿಸುತ್ತಿದೆ. ಕರ್ನಾಟಕದಲ್ಲಿಯೂ ಅದೇ ರೀತಿಯ ಹಲವು ಪ್ರಯೋಗಗಳನ್ನು ನಡೆಸಲು ಬಿಜೆಪಿ ಮುಂದಾಗಿದೆ. ಗೆಲುವು ಕಾಣದ ಕ್ಷೇತ್ರಗಳಲ್ಲಿ ಪ್ರಭಾವಿಗಳನ್ನು ಕಣಕ್ಕಿಳಿಸಲಾಗುವುದು. ಅವರ ಸ್ವಂತ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.