ವಿಜಯಪುರ: ಜಮಾತ್ ಎ ಅಹಲೆ ಸುನ್ನತ್ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಮೌಲ್ವಿ ತನ್ವೀರ್ ಹಾಶ್ಮಿ ಅವರಿಗೆ ಐಸಿಸ್ ಭಯೋತ್ಪಾದಕರೊಂದಿಗೆ ನಂಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಹಾಶ್ಮಿ ಅವರ ಕುಟುಂಬದವರ ಜೊತೆ ಯತ್ನಾಳ್ ಉದ್ಯಮದ ಪಾಲುದಾರರಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಹಾಶ್ಮಿ ಅವರ ದೊಡ್ಡಪ್ಪನ ಮಕ್ಕಳು ವಿಜಯಪುರದ ಗಾಂಧಿ ಚೌಕದ ಬಳಿ ಇರುವ ಟೂರಿಸ್ಟ್ ಹೋಟೆಲ್ ನ ಪಾಲುದಾರರಾಗಿದ್ದಾರೆ.
ವಿಜಯಪುರ ಹೊರ ವಲಯದ ವಿಜಯಪುರ -ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಸಮೀಪ ಇಬ್ಬರ ಮನೆಗಳು, ವಾಣಿಜ್ಯ ಮಳಿಗೆಗಳು ಅಕ್ಕ ಪಕ್ಕದಲ್ಲಿಯೇ ಇದ್ದು, ಈಗ ಏಕಾಏಕಿ ಇಬ್ಬರಲ್ಲಿ ವೈಮನಸ್ಸು ಮೂಡಿದ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.
ಯತ್ನಾಳ್ ಮತ್ತು ಹಾಶ್ಮಿ ಕುಟುಂಬದವರು ಅನೇಕ ವರ್ಷಗಳ ಹಿಂದೆಯೇ ಟೂರಿಸ್ಟ್ ಹೋಟೆಲ್ ಆರಂಭಿಸಿದ್ದು, ಇಬ್ಬರ ಕುಟುಂಬದವರು ಪಾಲುದಾರಿಕೆ ಇದೆ. ಹೋಟೆಲ್ ನಲ್ಲಿ ಪಾಲುದಾರರಾಗಿದ್ದು, ಮನೆಗಳು, ವಾಣಿಜ್ಯ ಅಕ್ಕಪಕ್ಕದಲ್ಲಿ ಇದ್ದರೂ ಮೌಲ್ವಿಗೆ ಐಸಿಸ್ ಜೊತೆ ನಂಟು ಇರುವುದು ಯತ್ನಾಳ್ ಗೆ ಇಷ್ಟು ದಿನ ಗೊತ್ತಿರಲಿಲ್ಲವೇ? ಇಷ್ಟು ದಿನ ಏಕೆ ಸುಮ್ಮನಿದ್ದರು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನಿಸಿದ್ದಾರೆ.