ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ NDA ಮೈತ್ರಿಕೂಟಕ್ಕೆ ಬಹುಮತ ಬಂದಿದ್ದು, ಭಾನುವಾರದಂದು ಮೋದಿ ಸತತ ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ 71 ಮಂದಿ ಸಂಸದರು ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾದವರ ಪೈಕಿ ಕೇರಳದ ಬಿಜೆಪಿ ಸಂಸದ ಹಾಗೂ ಖ್ಯಾತ ನಟ ಸುರೇಶ್ ಗೋಪಿ ಕೂಡಾ ಒಬ್ಬರಾಗಿದ್ದು, ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ. ಇದರ ಮಧ್ಯೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸುರೇಶ್ ಗೋಪಿ ಸಂಪುಟ ತೊರೆಯುವ ಕುರಿತ ಮಾತುಗಳನ್ನಾಡಿದ್ದಾರೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ಆದರೆ ಅದರ ಹಿಂದೆ ಬೇರೆಯದ್ದೆ ಕಾರಣ ಇದೆ.
ತಮಗೆ ಕ್ಯಾಬಿನೆಟ್ ರಾಂಕಿಂಗ್ ನೀಡಿಲ್ಲವೆಂಬ ಕಾರಣಕ್ಕಾಗಿ ಅಥವಾ ಉತ್ತಮ ಖಾತೆ ಸಿಗುತ್ತಿಲ್ಲವೆಂಬ ಕಾರಣಕ್ಕಾಗಿ ಸುರೇಶ್ ಗೋಪಿ ಸಚಿವ ಸ್ಥಾನ ತ್ಯಜಿಸುವ ಮಾತುಗಳನ್ನು ಆಡುತ್ತಿಲ್ಲ. ಅತ್ಯಂತ ಬ್ಯುಸಿ ನಟರಾಗಿರುವ ಅವರ ಬಳಿ 12ಕ್ಕೂ ಅಧಿಕ ಫಿಲ್ಮ್ ಪ್ರಾಜೆಕ್ಟ್ ಇದೆ ಎನ್ನಲಾಗಿದ್ದು, ಸಚಿವನಾಗಿ ಆಯ್ಕೆಯಾದರೆ ಅವುಗಳನ್ನು ಪೂರೈಸುವುದು ಕಷ್ಟ ಎಂಬ ಕಾರಣಕ್ಕೆ ಸುರೇಶ್ ಗೋಪಿಯವರಿಗೆ ಮಂತ್ರಿಯಾಗಲು ಇಷ್ಟವಿಲ್ಲವೆನ್ನಲಾಗಿದೆ.
ಕೇರಳದ ತ್ರಿಶೂರ್ ಕ್ಷೇತ್ರದ ಸಂಸದರಾಗಿರುವ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಂದಿನ ನರೇಂದ್ರ ಮೋದಿಯವರ ಸಂಪುಟದಲ್ಲಿ ತಮಗೆ ಮಂತ್ರಿ ಸ್ಥಾನ ಗ್ಯಾರಂಟಿ ಎಂದೇ ಪ್ರಚಾರ ಮಾಡಿದ್ದು, ಆದರೆ ನಟನಾ ವೃತ್ತಿಯಲ್ಲಿಯೇ ಮುಂದುವರೆಯಲು ಇಚ್ಚಿಸಿದ್ದಾರೆನ್ನಲಾಗಿದೆ. ಹೀಗಾಗಿ ಸಂಸದನಾಗಿಯೂ ಸಹ ಕ್ಷೇತ್ರದ ಜನತೆಗೆ ಅಭಿವೃದ್ಧಿ ಕಾರ್ಯ ಮಾಡುವುದರ ಜೊತೆಗೆ ಸಿನಿಮಾ ರಂಗದಲ್ಲೂ ಸಕ್ರಿಯವಾಗಲು ಅವರು ಚಿಂತನೆ ನಡೆಸಿದ್ದು, ಬಿಜೆಪಿ ಉನ್ನತ ನಾಯಕರ ಬಳಿ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.