ಕಲ್ಕತ್ತಾ: ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಆಹ್ವಾನ ನೀಡಿದ್ದಾರೆ. ಇದಕ್ಕೆ ಶಮಿ ಇನ್ನೂ ಒಪ್ಪಿಗೆ ನೀಡಿಲ್ಲವೆಂದು ಹೇಳಲಾಗಿದೆ.
ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಶಮಿ ದೇಶಿಯ ಕ್ರಿಕೆಟ್ ನಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಾರೆ. ಏಕದಿನ ವಿಶ್ವಕಪ್ ನಂತರ ಗಾಯದಿಂದ ಕ್ರಿಕೆಟ್ ನಿಂದ ದೂರ ಉಳಿದಿರುವ ಅವರು ಫಿಟ್ನೆಸ್ ಸಮಸ್ಯೆಯಿಂದಾಗಿ ಐಪಿಎಲ್ ಟೂರ್ನಿಯನ್ನು ಕೂಡ ತಪ್ಪಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರನ್ನು ಸ್ಪರ್ಧೆಗಿಳಿಸಿ ಪಶ್ಚಿಮ ಬಂಗಾಳದಿಂದ ಅಲ್ಪಸಂಖ್ಯಾತರ ಮತ ಸೆಳೆಯಲು ಬಿಜೆಪಿ ಆಸಕ್ತಿ ತೋರಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಇತ್ತೀಚೆಗಷ್ಟೇ ಶಮಿ ಅವರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಹಿಂಸಾಚಾರದಿಂದ ವಿವಾದಕ್ಕೀಡಾಗಿದ್ದ ಸಂದೇಶ್ ಖಾಲಿ ಒಳಗೊಂಡ ಬಸಿರ್ಹತ್ ಕ್ಷೇತ್ರದಲ್ಲಿ ಮೊಹಮ್ಮದ್ ಶಮಿ ಕಣಕ್ಕಿಳಿಸಲು ಚರ್ಚೆ ನಡೆದಿದೆ.
ಅವರು ಸ್ಪರ್ಧಿಸಿದ್ದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಕ್ರಿಯರಾಗಿರುವ ಆಟಗಾರನೊಬ್ಬ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಮೊದಲಿಗರಾಗಲಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಸಕ್ರಿಯ ಕ್ರಿಕೆಟರ್ ಆಗಿದ್ದಾಗಲೇ ರಾಜ್ಯಸಭೆ ಸದಸ್ಯರಾಗಿದ್ದರು.
ಮೊಹಮದ್ ಶಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ನಾಯಕರ ಆಹ್ವಾನದ ಬಗ್ಗೆ ಇನ್ನೂ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.