ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಬಿಜೆಪಿ ಪಕ್ಷದೊಂದಿಗಿನ ಸಂಬಂಧವನ್ನು ಮುರಿದುಕೊಂಡ ಒಂಭತ್ತನೇ ಶಾಸಕರಾಗಿದ್ದಾರೆ. ಹಿಂದಿನ ದಿನ, ಧರಂ ಸಿಂಗ್ ಸೈನಿ, ಅವರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದ್ದ ಭದ್ರತೆ ಮತ್ತು ನಿವಾಸವನ್ನು ಹಿಂದಿರುಗಿಸಿದ್ದರು, ಸೈನಿ ಬಿಜೆಪಿಯನ್ನು ತೊರೆಯಲಿದ್ದಾರೆ ಎಂಬ ಊಹಾಪೋಹಕ್ಕೆ ಇಂದು ತೆರೆ ಎಳೆದರು.
ಧರಂ ಸಿಂಗ್ ಸೈನಿ ಅವರು ರಾಜ್ಯ (ಸ್ವತಂತ್ರ ಉಸ್ತುವಾರಿ), ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದಾರೆ. ಪ್ರಸ್ತುತ ಸರ್ಕಾರ, ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ವ್ಯಾಪಾರಿಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಿಸುತ್ತಿದೆ ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕ್ಯಾಬಿನೆಟ್ ನ ಮೂವರು ಸಚಿವರು ಬಿಜೆಪಿಯನ್ನ ತೊರೆದಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ, ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿದ ಮೇಲೆ ಪಕ್ಷದಲ್ಲಿ ರಾಜೀನಾಮೆಗಳ ಸರಣಿ ಮುಂದುವರೆದಿದೆ. ಇನ್ನೂ ಹಲವು ಶಾಸಕರು ನನ್ನನ್ನು ಅನುಸರಿಸಲಿದ್ದಾರೆ ಎಂದು ಮೌರ್ಯ ಹೇಳಿದ್ದರು. ನಂತರದ ದಿನಗಳಲ್ಲಿ, ಇತರ ಬಿಜೆಪಿ ಶಾಸಕರಾದ ಬ್ರಜೇಶ್ ಪ್ರಜಾಪತಿ, ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್, ಮುಖೇಶ್ ವರ್ಮಾ, ವಿನಯ್ ಶಾಕ್ಯಾ ಸೇರಿದಂತೆ ಇತರರು ಪಕ್ಷವನ್ನು ತೊರೆದರು. ಧರಂ ಸಿಂಗ್ ಸೈನಿ ಅವರು ಮೌರ್ಯರವರ ಆಪ್ತರು ಎಂದು ಹೇಳಲಾಗುತ್ತಿದೆ.