ಬೆಂಗಳೂರು: ಪಕ್ಷ ತೊರೆದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಯ ಅತೃಪ್ತ ನಾಯಕರು ಭೇಟಿ ಮಾಡಿ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಂಗಳವಾರ ಬೆಂಗಳೂರಿಗೆ ಭೇಟಿ ನೀಡಿದ್ದ ಕೆ.ಎಸ್. ಈಶ್ವರಪ್ಪ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಬೆಂಗಳೂರಿನ ಕುಮಾರ ಪಾರ್ಕ್ ನಲ್ಲಿರುವ ಕೆ.ಎಸ್. ಈಶ್ವರಪ್ಪ ನಿವಾಸದಲ್ಲಿ ಮಂಗಳವಾರ ರಾತ್ರಿ ಸಭೆ ನಡೆದಿದೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ರಾಜೂಗೌಡ ಅವರು ಈಶ್ವರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಈಶ್ವರಪ್ಪ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಯತ್ನಾಳ್ ಹೇಳಿದ್ದರು. ಇದೇ ವೇಳೆ ನಾಯಕರ ಭೇಟಿ ಕುತೂಹಲ ಮೂಡಿಸಿದೆ. ಈಶ್ವರಪ್ಪ ನೇತೃತ್ವದಲ್ಲಿ ‘ರಾಯಣ್ಣ ಚೆನ್ನಮ್ಮ ಬ್ರಿಗೇಡ್’ ಹೆಸರಲ್ಲಿ ಸಂಘಟನೆಯೊಂದನ್ನು ಆರಂಭಿಸುವ ಕುರಿತಂತೆ ನಾಯಕರ ನಡುವೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.