ಬೆಂಗಳೂರು: ಬಿಜೆಪಿ ನಾಯಕರೆಲ್ಲರೂ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಾಗಿ ಹೋಗಬೇಕೆಂದು ಆರ್.ಎಸ್.ಎಸ್. ಮುಖಂಡರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಹತ್ವದ ಸಭೆ ನಡೆಸಿ ಆರ್.ಎಸ್.ಎಸ್. ತಾಕೀತು ಮಾಡಿದ ಮರುದಿನವೇ ಬಿಜೆಪಿಯ ಅತೃಪ್ತ ನಾಯಕರೆಲ್ಲರೂ ಸೇರಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ಫಲಿತಾಂಶ ರದ್ದುಗೊಳಿಸಬೇಕೆಂದು ಪ್ರತ್ಯೇಕವಾಗಿ ತೆರಳಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಆರ್.ಎಸ್.ಎಸ್. ನಡೆಸಿದ ಸಭೆಯ ಬಳಿಕವೂ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಈ ಮೂಲಕ ಬಯಲಾಗಿದೆ.
ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ, ಅರವಿಂದ ಲಿಂಬಾವಳಿ, ಅಣ್ಣಾ ಸಾಹೇಬ್ ಜೊಲ್ಲೆ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್ ಸೇರಿದಂತೆ ಹಲವು ನಾಯಕರು ಶುಕ್ರವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ, ರಾಯಚೂರು ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದ್ದು, ಫಲಿತಾಂಶ ರದ್ದುಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ಭೇಟಿಯ ಬಳಿಕ ಯತ್ನಾಳ್ ತಿಳಿಸಿದ್ದಾರೆ.