ಶಿವಮೊಗ್ಗ: ಪುತ್ರನಿಗೆ ಟಿಕೆಟ್ ತಪ್ಪಿದ್ದಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಬಂಡಾಯ ಬಾವುಟ ಹಾರಿಸಿದ್ದು, ಅವರ ಬಂಡಾಯ ಶಮನಕ್ಕೆ ಬಿಜೆಪಿ ನಾಯಕರು ಹರಸಾಹಸ ನಡೆಸಿದ್ದಾರೆ.
ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಸಿಗದಿರುವುದಕ್ಕೆ ಈಶ್ವರಪ್ಪ ಅಸಮಾಧಾನಗೊಂಡಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಸಭೆ ನಡೆಸಿ ಕಾರ್ಯಪ್ರವೃತ್ತರಾಗಿದ್ದಾರೆ.
ನಾಳೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಈಶ್ವರಪ್ಪ ನಿವಾಸಕ್ಕೆ ಬಿಜೆಪಿ ಮೂವರು ನಾಯಕರು ಆಗಮಿಸಿದ್ದಾರೆ. ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಈಶ್ವರಪ್ಪ ನಿವಾಸಕ್ಕೆ ಮಾಜಿ ಸಚಿವ ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಡಿ.ಎಸ್. ಅರುಣ್ ಭೇಟಿ ನೀಡಿದ್ದಾರೆ. ಈಶ್ವರಪ್ಪ ಜೊತೆ ಒಂದು ಗಂಟೆಗೂ ಅಧಿಕ ಕಾಲ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.
ಬಿಜೆಪಿ ಮುಖಂಡರ ಮನವಿಗೆ ಈಶ್ವರಪ್ಪ ಸ್ಪಂದಿಸಿಲ್ಲ. ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಸ್ಪರ್ಧೆ ಖಚಿತವೆಂದು ಹೇಳಿದ್ದಾರೆನ್ನಲಾಗಿದೆ.