ಕೆಲವೇ ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ಬಾಂಬ್(ಆಡಿಯೋ ತಮ್ಮದಲ್ಲ ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ) ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಜಗದೀಶ್ ಶೆಟ್ಟರ್, ಮತ್ತು ಈಶ್ವರಪ್ಪ ಟೀಂ ಹೊರಗೆ ಹೋಗುತ್ತದೆ ಎಂದು ಹೇಳಲಾಗಿದ್ದ ಆಡಿಯೋ ರಾಜಕೀಯದಲ್ಲಿ ಭಾರಿ ಬದಲಾವಣೆಯ ಸುಳಿವು ನೀಡಿತ್ತು.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಮತ್ತು ಸಿ.ಪಿ. ಯೋಗೇಶ್ವರ್ ಹೈಕಮಾಂಡ್ ಮಟ್ಟದಲ್ಲಿ ಭಾರಿ ಪರಿಶ್ರಮ ಹಾಕಿದ್ದರು. ಇನ್ನು ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡದಂತೆ ಸ್ವಾಮೀಜಿಗಳ ದಂಡೇ ರಕ್ಷಣೆಗೆ ಧಾವಿಸಿದ್ದು, ಯಡಿಯೂರಪ್ಪರನ್ನು ಬದಲಾಯಿಸಿದರೆ ಭಾರಿ ಬೆಲೆ ತೆರಬೇಕಾದೀತು ಎಂದು ವಾರ್ನಿಂಗ್ ಮಾಡಿದ್ದರು. ಯಡಿಯೂರಪ್ಪ ಕೂಡ ತಮ್ಮನ್ನು ಬದಲಾವಣೆ ಮಾಡುವುದೇ ಆದಲ್ಲಿ ತಮ್ಮ ಆಪ್ತನನ್ನೇ ಸಿಎಂ ಮಾಡುವಂತೆ ಹೈಕಮಾಂಡ್ ಗೆ ತಿಳಿಸಿದ್ದರು.
ಆದರೆ, ಚಾಣಾಕ್ಷ ನಡೆ ಅನುಸರಿಸಿದ ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆದಿದೆ. ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿ ಸ್ವಾಮೀಜಿಗಳನ್ನು ಕೂಡ ಸಮಾಧಾನ ಮಾಡುವ ಜೊತೆಗೆ ಯಡಿಯೂರಪ್ಪ ವಿರೋಧಿ ಪಾಳಯಕ್ಕೆ ಸಮಾಧಾನ ತರುವಂತಹ ನಿರ್ಧಾರ ಕೈಗೊಂಡಿದೆ.
ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೂ ಅವರು ಸೂಚಿಸಿದ ವ್ಯಕ್ತಿಯನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿದೆ. ನಾಯಕತ್ವ ಬದಲಾವಣೆ ಮೂಲಕ ಬಿ.ಎಸ್.ವೈ. ವಿರೋಧಿಗಳನ್ನೂ ತಣಿಸಲಾಗಿದೆ. ಸ್ವಾಮೀಜಿಗಳ ಆಕ್ರೋಶ ತಣ್ಣಗಾಗಿಸಲು ಲಿಂಗಾಯಿತರಿಗೇ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ.
ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಅಪವಾದಕ್ಕೆ ಗುರಿಯಾಗದೇ ಗೋವಿಂದ ಕಾರಜೋಳ, ಆರ್. ಅಶೋಕ್, ಮತ್ತು ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಹೀಗೆ ಹಲವು ಬಿಜೆಪಿ ಹೈಕಮಾಂಡ್ ಒಂದೇ ಕಲ್ಲಿಗೆ ಅನೇಕ ಹಕ್ಕಿಗಳನ್ನು ಹೊಡೆದಿದೆ.