ಕಲಬುರ್ಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪಘಾತ ಪ್ರಕರಣವನ್ನು ಹಲ್ಲೆ ಪ್ರಕರಣವೆಂದು ಬಿಜೆಪಿ ಮುಖಂಡ ಕಥೆ ಕಟ್ಟಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
ಕೆಲ ದಿನಗಳ ಹಿಂದೆ ಕಲಬುರ್ಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಮಣಿಕಂಠ ರಾಠೋಡ್ ಆರೋಪಿಸಿದ್ದರು. ಅಲ್ಲದೇ ಹಲ್ಲೆ ಪ್ರಕರಣದ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮಣಿಕಂಠ ರಾಠೋಡ್ ಬೆಂಬಲಿಗರ ವಿಚಾರಣೆ ನಡೆಸಿದ ಪೊಲೀಸರಿಗೆ ಹಲ್ಲೆ ಪ್ರಕರಣ ಎಂಬುದೇ ಕಟ್ಟು ಕಥೆ ಎಂಬುದು ಗೊತ್ತಾಗಿದೆ. ತನ್ನ ಕಾರು ಅಪಘಾತವಾಗಿದ್ದನ್ನು ಹಲ್ಲೆ ಪ್ರಕರಣ ಎಂದು ಸುಳ್ಳು ಹೇಳಿ ಮಣಿಕಂಠ ರಾಠೋಡ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಪೊಲಿಸರು ಬಿಜೆಪಿ ಮುಖಂಡನ ನಾಟಕ ಬಯಲು ಮಾಡಿದ್ದಾರೆ.
ಮಣಿಕಂಠ ರಾಠೋಡ್, ನ.18ರಂದು ತಮ್ಮ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಬರುತ್ತಿದ್ದಾಗ ರಾತ್ರಿ ಯಾದಗಿರಿ ಜಿಲ್ಲೆಯ ಚೆಪಟ್ಲಾ ಬಳಿ ಅಪಘಾತವಾಗಿತ್ತು. ಕಾರು ಮರಕ್ಕೆ ಡಿಕ್ಕಿ ಹೊಡೆದು ಮಣಿಕಂಠ ರಾಠೋಡ್ ಗಾಯಗೊಂಡಿದ್ದರು. ಗಾಯಾಳು ರಾಠೋಡ್, ತನ್ನ ಮತ್ತೊಂದು ಕಾರಿನಲ್ಲಿ ಚಿತ್ತಾಪುರಕ್ಕೆ ತೆರಳಿದ್ದರು. ಅಪಘಾತಗೊಂಡ ಕಾರನ್ನು ರಾತ್ರೋರಾತ್ರಿ ಟೋಯಿಂಗ್ ಮೂಲಕ ಹೈದರಾಬಾದ್ ಗೆ ಶಿಫ್ಟ್ ಮಾಡಿದ್ದರು. ಚಿತ್ತಾಪುರದಿಂದ ಕಲಬುರ್ಗಿಗೆ ಬರುವಾಗ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಚಿತ್ತಾಪುರ ಆಸ್ಪತ್ರೆಯಿಂದ ಕಲಬುರ್ಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಮಾರಣಾಂತಿಕ ಹಲ್ಲೆಯಾಗಿದೆ ಎಂದು ಹೇಳಿದ್ದ ಕಾರಿನಲ್ಲಿ ರಕ್ತದ ಕಲೆಯಾಗಲಿ, ಹಲ್ಲೆಯಾದ ಬಗ್ಗೆ ಬೇರೆ ಯಾವುದೇ ಕುರುಹಾಗಲಿ ಇರಲಿಲ್ಲ. ಅಲ್ಲದೇ ಮಣಿಕಂಠ ರಾಠೋಡ್ ಅವರ ಕಾಲ್ ಹಿಸ್ಟ್ರಿ ಪರಿಶೀಲಿಸಿದಾಗ ಹಲ್ಲೆ ಕಥೆ ಅಪಘಾತದ ಕಥೆಯಾಗಿ ಬದಲಾಗಿದೆ. ಅಪಘಾತವಾದಾಗ ರಾಠೋಡ್ ಜೊತೆ ಇದ್ದವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹಲ್ಲೆ ನಡೆದಿಲ್ಲ ಅಪಘಾತವಾಗಿತ್ತು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಅಪಘಾತ ಪ್ರಕರಣವನ್ನು ಹಲ್ಲೆ ಪ್ರಕರಣ ಎಂದು ಸುಳ್ಳು ಕಥೆ ಕಟ್ಟಿ ರಾಜಕೀಯವಾಗಿ ಬಳಸಿಕೊಳ್ಳಲು ರಾಠೋಡ್ ಮುಂದಾಗಿದ್ದು ಬಟಾಬಯಲಾಗಿದೆ. ಈ ಬಗ್ಗೆ ಕಲಬುರ್ಗಿ ಎಸ್ ಪಿ ಅಡ್ಡೂರು ಶ್ರೀನಿವಾಸಲು ರಾಠೋಡ್ ಮೇಲೆ ಕೊಲೆಯತ್ನ ನಡೆದಿಲ್ಲ. ಅಪಘಾತವಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.