ತಿರುವನಂತಪುರಂ: ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನ ಪಿಎಫ್ ಐ ಸದಸ್ಯರಿಗೆ ಗಲ್ಲುಶಿಕ್ಷೆ ವಿಧಿಸಿ ಕೇರಳ ಕೋರ್ಟ್ ತೀರ್ಪು ನೀಡಿದೆ.
2021ರ ಡಿಸೆಂಬರ್ ನಲ್ಲಿ ಅಲಪ್ಪುಳ ಜಿಲ್ಲೆಯಲ್ಲಿ ಬಿಜೆಪಿ ಒಬಿಸಿ ವಿಭಾಗದ ಮುಖಂಡ ರಂಜಿತ್ ಶ್ರೀನಿವಾಸನ್ ಅವರನ್ನು ಪತ್ನಿ ಹಾಗೂ ಮಗುವಿನ ಎದುರಲ್ಲೇ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ನಿಷೇಧಿತ ಇಸ್ಲಾಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ 15 ಆರೋಪಿಗಳನ್ನು ಬಂಧಿಸಲಾಗಿತ್ತು.
ಪ್ರಕರಣದಲ್ಲಿ 15 ಸದಸ್ಯರ ಆರೋಪ ಸಾಬೀತಾಗಿದ್ದು, ತಪ್ಪಿತಸ್ಥರು ಎಂದು ಕೋರ್ಟ್ ಘೋಷಿಸಿತ್ತು. ಇಂದಿಗೆ ತೀರ್ಪು ಕಾಯ್ದಿರಿಸಲಾಗಿತ್ತು. ಇದೀಗ ಹತ್ಯೆ ಪ್ರಕರಣದ ಅಪರಾಧಿಗಳಾದ ಪಿಎಫ್ ಐ ನ 15 ಸದಸ್ಯರಿಗೂ ಕೇರಳದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ವಿ.ಜಿ.ಶ್ರೀದೇವಿ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಮೊದಲ 8 ಆರೋಪಿಗಳ ವಿರುದ್ಧ ಕೊಲೆ ಅಪರಾಧ ಸಾಬೀತಾಗಿದ್ದರೆ ಉಳಿದವರ ವಿರುದ್ಧ ಕ್ರಿಮಿನಲ್ ಪಿತೂರಿ ನಡೆಸಿರುವುದು ಸಾಬೀತಾಗಿದೆ. ನಿಜಾಮ್, ಅಜ್ಮಲ್, ಅನೂಪ್, ಎಂಡಿ ಅಸ್ಲಾಂ, ಸಲಾಂ, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಶ್ಯಾದ್, ಜಜೀಬ್, ನವಾಜ್, ಶೆಮೀರ್, ನಜೀರ್, ಜಾಕಿರ್ ಹುಸೇನ್, ಶಾಜಿ, ಶಮ್ನಾಜ್ ಗಲ್ಲುಶಿಕ್ಷೆಗೆ ಒಳಗಾದವರು.