ಸಹೋದ್ಯೋಗಿಯಿಂದಲೇ ತಮ್ಮ ಸ್ಟಿಂಗ್ ವಿಡಿಯೋ ರಿಲೀಸ್ ಆದ ಬಳಿಕ ಬಿಜೆಪಿಯ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಟಿ. ರಾಘವನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಸದಸ್ಯ, ಪತ್ರಕರ್ತ ಹಾಗೂ ಯುಟ್ಯೂಬರ್ ಆಗಿರುವ ಮದನ್ ರವಿಚಂದ್ರನ್ ಎಂಬವರು ಪಕ್ಷದ ಮಹಿಳಾ ಕಾರ್ಯಕರ್ತೆಯೊಂದಿಗೆ ರಾಘವನ್ ಅಶ್ಲೀಲವಾಗಿ ಮಾತನಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಪಕ್ಷದ ರಾಜ್ಯ ಕಾಯದರ್ಶಿ ಮಲಾರ್ಕೊಡಿ ನೇತೃತ್ವದ ಸಮಿತಿಯು ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಹೇಳಿದ್ದರು.
ಯುಟ್ಯೂಬ್ ಚಾನೆಲ್ನಲ್ಲಿ ರವಿಚಂದ್ರನ್, ಅಣ್ಣಾಮಲೈಗೆ ತಿಳಿಸಿಯೇ ತಾವು ಈ ವಿಡಿಯೋವನ್ನು ರಿಲೀಸ್ ಮಾಡ್ತಿರೋದಾಗಿ ಹೇಳಿದ್ದರು.
ಈ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ಮದನ್ 2 ಬಾರಿ ನನ್ನನ್ನು ಭೇಟಿ ಮಾಡಿದ್ದರು ಹಾಗೂ ರಾಘವನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನನ್ನ ಬಳಿ ಆಗ್ರಹಿಸಿದ್ದರು. ಈ ವೇಳೆ ನಾನು ಸಾಕ್ಷ್ಯವನ್ನು ನೀವು ಪ್ರಸ್ತುತಪಡಿಸದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಹೀಗಾಗಿ ಸಾಕ್ಷ್ಯವನ್ನು ನೀಡಿ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.
ಇತ್ತ ಕೆ.ಟಿ ರಾಘವನ್ ಈ ಸಂಬಂಧ ಟ್ವೀಟಾಯಿಸಿದ್ದು, ಈ ಆರೋಪವು ಸತ್ಯಕ್ಕೆ ದೂರಾಗಿದೆ ಮಾತ್ರವಲ್ಲದೇ ತಾವು ಕಾನೂನು ಹೋರಾಟ ನಡೆಸೋದಾಗಿ ಹೇಳಿದ್ದಾರೆ.
ತಮಿಳುನಾಡಿನ ಜನತೆ ಹಾಗೂ ಪಕ್ಷಕ್ಕೆ ನಾನು ಯಾರೆಂದು ತಿಳಿದಿದೆ, ನನ್ನನ್ನು ನಂಬಿದವರಿಗೂ ನಾನು ಏನೆಂದು ತಿಳಿದಿದೆ, ಯಾವುದೇ ಲಾಭದ ನಿರೀಕ್ಷೆ ಮಾಡದೇ ನಾನು ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನ ಗಮನಸಿದ್ದೇನೆ. ನನ್ನ ಹಾಗೂ ನನ್ನ ಪಕ್ಷಕ್ಕೆ ಧಕ್ಕೆ ತರುವ ಸಲುವಾಗಿ ಈ ವಿಡಿಯೋವನ್ನ ಹರಿಬಿಡಲಾಗಿದೆ. ಇಂದು ನಾನು ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿದ್ದೇನೆ. ಹಾಗೂ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಈ ಎಲ್ಲಾ ಆರೋಪವನ್ನು ನಾನು ತಳ್ಳಿ ಹಾಕುತ್ತಿದ್ದೇನೆ. ಕಾನೂನಿನ ಮೂಲಕವೇ ಇವರನ್ನು ತಲುಪುತ್ತೇನೆ. ಧರ್ಮಕ್ಕೆ ಜಯವಿದೆ ಎಂದು ತಮಿಳಿನಲ್ಲಿ ಟ್ವೀಟಾಯಿಸಿದ್ದಾರೆ.