ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಧ್ಯಪ್ರದೇಶದ ನಾಯಕರೊಬ್ಬರು 400 ಕಾರ್ ಗಳ ಮೆರವಣಿಗೆ ಮಾಡುವ ಮೂಲಕ ಮತ್ತೆ ಕೈ ಪಕ್ಷಕ್ಕೆ ಮರಳಿದ್ದಾರೆ. ಈ ವೇಳೆ ಸೈರನ್ ಬಳಸಿರುವುದು ಟೀಕೆಗೆ ಗುರಿಯಾಗಿದೆ.
ಮಧ್ಯಪ್ರದೇಶದ ಶಿವಪುರಿಯಿಂದ ಭೋಪಾಲ್ ಗೆ ಸುಮಾರು 300 ಕಿಮೀ ದೂರ 400 ಕಾರುಗಳ ಮೆರವಣಿಗೆಯೊಂದಿಗೆ ಬೈಜನಾಥ್ ಸಿಂಗ್ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಂಡರು. ಅವರು 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಬಂಡಾಯದ ಸಮಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಶಿವಪುರಿಯಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ಬೈಜನಾಥ್ ಸಿಂಗ್ ಅವರು 2020 ರ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯದ ಸಮಯದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದ ಸಂದರ್ಭದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ನಡೆಯನ್ನು ಅನುಸರಿಸಿ ಕಮಲ ಹಿಡಿದಿದ್ದರು.
ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬೈಜನಾಥ್ ಸಿಂಗ್ ಬಿಜೆಪಿ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಟಿಕೆಟ್ ಸಿಗುವ ಭರವಸೆ ಇಲ್ಲದ ಕಾರಣ ಅವರು ಮತ್ತೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರು ಬೈಜನಾಥ್ ಸಿಂಗ್ ರನ್ನು ಪಕ್ಷಕ್ಕೆ ಮರಳಿ ಸ್ವಾಗತಿಸಿದರು. ಬೈಜನಾಥ್ ಸಿಂಗ್ ಜೊತೆಗೆ ಬಿಜೆಪಿಯ 15 ಜಿಲ್ಲಾ ಮಟ್ಟದ ನಾಯಕರು ಕಾಂಗ್ರೆಸ್ ಪಕ್ಷ ಸೇರಿದರು.
ತಮ್ಮ ಪಕ್ಷ ಬದಲಾವಣೆಯನ್ನು ಗುರುತಿಸಲು, ಬೈಜನಾಥ್ ಸಿಂಗ್ ಶಿವಪುರಿಯಿಂದ ಭೋಪಾಲ್ ನಲ್ಲಿರುವ ಕಾಂಗ್ರೆಸ್ ಕಚೇರಿಗೆ 400 ಕಾರುಗಳೊಂದಿಗೆ ಮೆರವಣಿಗೆಯಲ್ಲಿ ಬಂದರು. ಹಲವಾರು ಕಾರುಗಳು ಸೈರನ್ ಹಾಕಿಕೊಂಡು ಓಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವೀಡಿಯೊ ವೈರಲ್ ಆದ ನಂತರ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸೈರನ್ ಬಳಕೆಯನ್ನ ಟೀಕಿಸಿದ್ದಾರೆ.
ಕಾನೂನಿನ ಪ್ರಕಾರ ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸೈರನ್ ಬಳಸಲು ಅನುಮತಿ ಇದೆ. ಇವುಗಳಲ್ಲಿ ಆಂಬ್ಯುಲೆನ್ಸ್ ಗಳು, ಅಗ್ನಿಶಾಮಕ ದಳಗಳು ಮತ್ತು ಕೆಲವು ಸಂದರ್ಭಗಳಲ್ಲಿ ಪೊಲೀಸರು ಸೇರಿದ್ದಾರೆ. ಆದರೆ ವಿಶೇಷವಾಗಿ ಕೆಂಪು ದೀಪಗಳ ನಿಷೇಧದ ನಂತರ ರಾಜಕಾರಣಿಗಳು ಇದನ್ನು ಹೆಚ್ಚಾಗಿ ಅಧಿಕಾರದ ಲಜ್ಜೆಗೆಟ್ಟ ಪ್ರದರ್ಶನದಲ್ಲಿ ಬಳಸುತ್ತಾರೆ ಎಂದಿದ್ದಾರೆ. ಸೈರನ್ ಗಳ ಬಳಕೆ ಕಾಂಗ್ರೆಸ್ ನ ಊಳಿಗಮಾನ್ಯ ಮನೋಭಾವವನ್ನು ಬಿಂಬಿಸುತ್ತದೆ ಎಂದು ಬಿಜೆಪಿ ಹೇಳಿದೆ.