ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹಿಸಿದ ನಂತರವೂ ಸಿಎಂ ಪರ-ವಿರೋಧ ಬಣಗಳಿಂದ ಆರೋಪ-ಪ್ರತ್ಯಾರೋಪ ಮುಂದುವರೆದಿದೆ.
ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲವೆಂದು ಅರುಣ್ ಸಿಂಗ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಸಿಎಂ ವಿರೋಧಿ ಬಣದಲ್ಲಿರುವ ನಾಯಕರು ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ್ದು, ಸಿಎಂ ಪರವಿರುವ ಬಣದಿಂದ ವಿರೋಧ ವ್ಯಕ್ತಪಡಿಸಲಾಗಿದೆ. ಬೆಂಕಿಗೆ ತುಪ್ಪ ಸುರಿಯುವಂತೆ ಬಹಿರಂಗ ಹೇಳಿಕೆಗಳು ಬರತೊಡಗಿವೆ. ಬಹಿರಂಗ ಹೇಳಿಕೆ ನೀಡಬಾರದು ಎಂದು ಅರುಣ್ ಸಿಂಗ್ ಸೂಚನೆ ನೀಡಿದರೂ, ತಲೆಕೆಡಿಸಿಕೊಳ್ಳದ ನಾಯಕರ ನಡುವೆ ವಾಕ್ಸಮರ ನಡೆದಿದೆ.
ಅರುಣ್ ಸಿಂಗ್ ಬಂದ ನಂತರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆ ಇತ್ತಾದರೂ ಮೂರು ದಿನಗಳ ನಂತರವೂ ಸಮಸ್ಯೆ ಸರಿಯಾದಂತೆ ಕಾಣುತ್ತಿಲ್ಲ. ಅಷ್ಟಕ್ಕೂ ಅರುಣ್ ಸಿಂಗ್ ಅವರೇನು ನಿರ್ಧಾರ ಕೈಗೊಳ್ಳುವುದಿಲ್ಲ. ಇಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ನೀಡಬಹುದು ಅಷ್ಟೇ ಎಂದು ಹೇಳಲಾಗಿದೆ. ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತೆ ಕಂಡು ಬಂದರೂ ಕೂಡ ಒಳಗೊಳಗೆ ಬಿ.ಎಸ್.ವೈ. ಬದಲಾವಣೆಗೆ ಪ್ರಯತ್ನಗಳು ಮುಂದುವರೆದಿವೆ ಎಂದು ಹೇಳಲಾಗುತ್ತಿದೆ.