ಹಾಸನ: ಇಂದು ಹಾಸನ ನಗರಸಭಾ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಜೆಡಿಎಸ್‌ನ ಚಂದ್ರೇಗೌಡ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಲತಾ ಸುರೇಶ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ವಿರುದ್ಧ ಪರಾಭಗೊಂಡಿದ್ದ ಬಿಜೆಪಿಯ ಪ್ರೀತಂ ಗೌಡ, ನಗರಸಭಾ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲೂ ಮುಖಭಂಗ ಅನುಭವಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದು, ಹೀಗಾಗಿ ಹಾಸನ ನಗರಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುವ ಇಂಗಿತವನ್ನು ಪ್ರೀತಂ ಗೌಡ ವ್ಯಕ್ತಪಡಿಸಿದ್ದರು. ಅಲ್ಲದೆ ಅಧ್ಯಕ್ಷ ಸ್ಥಾನವನ್ನು ತಲಾ ಹತ್ತು ತಿಂಗಳು ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಹಂಚಿಕೊಳ್ಳುವ ಪ್ರಸ್ತಾಪ ಇರಿಸಿದ್ದರು. ಆದರೆ ಹಾಸನ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಜೆಡಿಎಸ್ ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡಲು ಸಿದ್ಧವಿರಲಿಲ್ಲ.
ಹೀಗಾಗಿ ಹಾಸನ ನಗರಸಭಾ ಚುನಾವಣೆಯಲ್ಲಿ ಮೈತ್ರಿ ಪ್ರಸ್ತಾಪ ತಿರಸ್ಕರಿಸಿದ ಜೆಡಿಎಸ್ ನಾಯಕರು, ಅಧ್ಯಕ್ಷ ಸ್ಥಾನವನ್ನು ತಾವಿಟ್ಟುಕೊಂಡು ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿದ್ದಾರೆ. ಹಾಸನ ನಗರ ಸಭೆಯಲ್ಲಿ ಜೆಡಿಎಸ್ 17 ಸದಸ್ಯರನ್ನು ಹೊಂದಿದ್ದು ಬಿಜೆಪಿ 14 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಹಾಗೂ ಪಕ್ಷೇತರರು ತಲಾ ಎರಡು ಸ್ಥಾನಗಳನ್ನು ಹೊಂದಿದ್ದಾರೆ.