ಬೆಂಗಳೂರು : ರಾಜ್ಯ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ಫಲಿಸದು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.ಕೇಂದ್ರದ NDA ಸರ್ಕಾರವು ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ರಾಮನಗರದಲ್ಲಿ ಹಮ್ಮಿಕೊಂಡಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರವನ್ನು ಉರುಳಿಸಲು ಬಿಜೆಪಿ ಮತ್ತು ಜೆಡಿಎಸ್ ಷಡ್ಯಂತ್ರ ರೂಪಿಸಿವೆ. ಸಿದ್ದರಾಮಯ್ಯನವರ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನೇನೂ ಇಲ್ಲ. ಒಂದು ಖಾಸಗಿ ದೂರಿನ ಮೇಲೆ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಈ ಮೂಲಕ ಅವರು ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.
ನಾವು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಅವ್ಯವಹಾರಗಳನ್ನು ಬಯಲಿಗೆ ಎಳೆಯಲಿದ್ದೇವೆ. ನಮ್ಮ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ಫಲಿಸದು. ರಾಜ್ಯದ ಜನತೆಯ ಶಕ್ತಿ ಬಹಳ ದೊಡ್ಡದಿದೆ. ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.
ಇಂದಿನ ಜನಾಂದೋಲನ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಡಾ.ಶರಣು ಪ್ರಕಾಶ ಪಾಟೇಲ್, ಡಾ.ಎಂ.ಸಿ.ಸುಧಾಕರ, ಜಮೀರ್ ಅಹಮದ್, ಚಲುವರಾಯ ಸ್ವಾಮಿ, ಬೈರತಿ ಸುರೇಶ್, ಸ್ಥಳೀಯ ಶಾಸಕರಾದ ಇಕ್ಬಾಲ್ ಹುಸೇನ್, ಮಾಜಿ ಸಂಸದರಾದ ಡಿ ಕೆ ಸುರೇಶ ಮುಂತಾದವರು ಉಪಸ್ಥಿತರಿದ್ದರು.