ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ನನ್ನ ಸಹಮತವಿಲ್ಲ. ವೈಯಕ್ತಿಕವಾಗಿ ನನಗೂ ಅಸಮಾಧಾನವಿದೆ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಇದೇ ವಿಚಾರವಾಗಿ ಅಸಮಾಧಾನಗೊಂಡು ನಾವು ಪಕ್ಷ ತೊರೆದು ಬಿಜೆಪಿಗೆ ಬಂದಿದ್ದೆವು. ಈಗ ಇಲ್ಲಿಯೂ ಅದೇ ಪರಿಸ್ಥಿತಿ ಎದುರಾಗಿದೆ. ಬಿಜೆಪಿಗೆ ಜೆಡಿಎಸ್ ಕೂಡ ಎದುರಾಳಿಯೇ. ಹಾಗಿರುವಾಗ ಇವರು ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿರುವುದರ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ನಮಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಯಾರೂ ಕೂಡ ವೈಯಕ್ತಿಕವಾಗಿ ಮಾತನಾಡುತ್ತಿಲ್ಲ. ಎಲ್ಲರಿಗೂ ಅಸಮಾಧಾನವಿದೆ. ಮಾನಸಿಕವಾಗಿ ಕಿರುಕುಳವಿದೆ. ಹಾಗೂ ಒಂದು ವೇಳೆ ನಾಯಕರು ಒಂದಾಗಬಹುದು ಆದರೆ ಕಾರ್ಯಕರ್ತರಿಗೆ ಹಿಂಸೆ ಆಗುತ್ತದೆ. ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಎಂಎಲ್ ಎ ಆಗಲ್ಲ ಎಂದಿದ್ದಾರೆ.
ಮೈತ್ರಿ ಅಧಿಕೃತವಾದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನಮಗೆ ಹೈಕಮಾಂಡ್ ಅಂದರೆ ಯಡಿಯೂರಪ್ಪ. ಅವರು ನಾನು ಹೇಳುವವರೆಗೂ ಏನೂ ಮಾತನಾಡಬೇಡ ಎಂದಿದ್ದಾರೆ. ಹಾಗಾಗಿ 1 ತಿಂಗಳಿಂದ ನಾನು ಏನೂ ಮಾತನಾಡಿಲ್ಲ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ವೈಯಕ್ತಿಕವಾಗಿ ನನ್ನ ಸಹಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.